ವಿಪ್ರರು ಸಮಾಜದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ: ಖರ್ಗೆ

KannadaprabhaNewsNetwork |  
Published : Apr 15, 2024, 01:20 AM IST
ಪ್ರಿಯಾಂಕ್‌ | Kannada Prabha

ಸಾರಾಂಶ

ವಿಪ್ರರು ಸಮಾಜದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಯಾವುದೇ ಶುಭ ಸಂದರ್ಭದಲ್ಲಿ ಜನರು ವಿಪ್ರರ ಸಲಹೆ ಕೇಳುವುದು ನಡೆದುಕೊಂಡು ಬಂದ ರೂಢಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಪ್ರರು ಸಮಾಜದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಯಾವುದೇ ಶುಭ ಸಂದರ್ಭದಲ್ಲಿ ಜನರು ವಿಪ್ರರ ಸಲಹೆ ಕೇಳುವುದು ನಡೆದುಕೊಂಡು ಬಂದ ರೂಢಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದಲ್ಲಿ ನಡೆದ ವಿಪ್ರ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಪ್ರ ಸಮಾಜದ ಹಿರಿಯರು ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಹಾಗೂ ಧರಂ ಸಿಂಗ್ ಸಾಹೇಬರ ಮಾರ್ಗದರ್ಶಕರಾಗಿ ಹಲವಾರು ಪ್ರಮುಖ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ನೆನಪಿಸಿಕೊಂಡ ಸಚಿವರು, ಯಾವುದೇ ಸಮಾಜದ ಬಡವರಿದ್ದರೂ ಕೂಡಾ ರಾಜ್ಯ ಸರ್ಕಾರ ಸಹಾಯ ಮಾಡಲು ಸಿದ್ಧವಿದ್ದು ಅಂತವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನ ಮಾಡುತ್ತಿದೆ. ಸರ್ಕಾರ ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರವಾಗಿದೆ. ಅರ್ಚಕರ ಸಮಸ್ಯೆಗಳ ಬಗ್ಗೆ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾಲಿರೆಡ್ಡಿ ಅವರೊಂದಿಗೆ ಚರ್ಚಿಸಲು ಸಿದ್ದವಿದ್ದೇನೆ. ಕಲಬುರಗಿ ನಗರದಲ್ಲಿ ವಿಪ್ರ ಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನನ್ನನ್ನು ಹಿಂದೂವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ನಾನು ಯಾವುದೇ ಆಚರಣೆಯ ವಿರೋಧಿಯಲ್ಲ. ಅದುಮಾರು ಮಠದಲ್ಲಿ ಮೂರು ವರ್ಷ ಸಂಸ್ಕೃತ ಕಲಿತಿದ್ದೇನೆ ಎಂದು ಸಂಸ್ಕೃತ ಶ್ಲೋಕ ಹೇಳಿದ ಪ್ರಿಯಾಂಕ್ ಖರ್ಗೆ, ನಾನು ಪುರಾಣ ಗಳಲ್ಲಿನ ಸಂಗತಿಗಳನ್ನು ತಿಳಿದಿದ್ದೇನೆ. ವಾರಣಾಸಿ, ಬದರಿನಾಥ ಕೇದರನಾಥ, ಅಜ್ಮೇರ್, ಗಯಾ ಸೇರಿದಂತೆ ಹಲವಾರು ಶ್ರದ್ಧಾ ಕೇಂದ್ರಗಳಿಗೆ ಹೋಗಿದ್ದೇನೆ. ಯಾಕೆಂದರೆ ನನಗೆ ಕಲಿಯುವ ಆಸಕ್ತಿ ಇದೆ. ಇದರ ಜೊತೆಗೆ ಪ್ರಮುಖವಾಗಿ ಸಂವಿಧಾನದ ಆಚರಣೆಯಲ್ಲಿ ಬಲವಾದ ನಂಬಿಕೆ ಹೊಂದಿದ್ದು ಬಸವ ತತ್ವದ ಪರಿಪಾಲಕನಾಗಿದ್ದೇನೆ. ಸಮಾಜದ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತೇನೆ ಎಂದು ಹೇಳಿದರು.

ಖರ್ಗೆ ಸಾಹೇಬರು ಅಧಿಕಾರಲ್ಲಿದ್ದಾಗ ಆದಂತ ಅಭಿವೃದ್ಧಿಗಳಲ್ಲಿ ಈಗ ಕುಂಠಿತವಾಗಿದೆ. ನೀವೆಲ್ಲ ಅಭಿವೃದ್ಧಿಯಲ್ಲಿ ಹೋಲಿಕೆ ಮಾಡಿ ಮತದಾನ ಮಾಡಿ. ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐ ಆಸ್ಪತ್ರೆ, ವರ್ತುಲ ರಸ್ತೆಗಳು, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ನಮ್ಮ ಪಕ್ಷದ ಕೊಡುಗೆಗಳಾಗಿವೆ. ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಝ ನಂತಹ ಪ್ರಮುಖ ಯೋಜನೆಗಳು ನಮ್ಮ ಕಾಲದಲ್ಲಿಯೇ ಮಂಜೂರಾಗಿದ್ದವು. ಆದರೆ, ಈ ಎಲ್ಲ ಯೋಜನೆಗಳು ವಾಪಸ್ ಹೋಗಿವೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅಭಿವೃದ್ದಿಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಹಾಗೂ ರಾಧಾಕೃಷ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಜಿಡಿಎ ಅಧ್ಯಕ್ಷ ನಾರಾಯಣರಾವ್ ಕಾಳೆ ಮಾತನಾಡಿ ಮೃದು ಮಾತಿನ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಗೆಲ್ಲುವುದು ಶತಃಸಿದ್ದ. ಯಾಕೆಂದರೆ, ಸಂಸದ ಉಮೇಶ್ ಜಾಧವ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಜನರು ನಿರಾಸೆಗೊಂಡಿದ್ದು ಈ ಸಲ ಕಾಂಗ್ರೆಸ್ ಗೆ ಆಶೀರ್ವದಿಸಲಿದ್ದಾರೆ ಎಂದರು.

ವಿಜಯಕುಮಾರ ಕಲ್ಮಣಕರ್ ಮಾತನಾಡಿ ವಿಪ್ರರ ಸಂಖ್ಯೆ ಕಡಿಮೆ ಇರಬಹುದು. ಆದರೆ, ವಿಪ್ರರು ಬೇರೆಯವರ ಮತ ಹಾಕಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ನಾರಾಯಣರಾವ್ ಕಾಳೆ, ರಾಘವೇಂದ್ರ ನಾಡಗೌಡ, ವಿಜಯಕುಮಾರ ಕಲ್ಮಣಕರ್, ಪ್ರಕಾಶ, ನಾರಾಯಣಚಾರ್ ಕಮಲಾಪುರ, ಮಲ್ಹಾರಾವ್ ಗಾರಂಪಳ್ಳಿ, ರಾಘವೇಂದ್ರ ಕುಲಕರ್ಣಿ, ಅನಿಲ್ ಅಷ್ಟಗಿ, ಪ್ರಶಾಂತ ಕೊರಳ್ಳಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ