ವಿರಾಜಪೇಟೆ: ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ ಸಂಭ್ರಮ

KannadaprabhaNewsNetwork |  
Published : Sep 20, 2024, 01:41 AM IST
ಚಿತ್ರ : 19ಎಂಡಿಕೆ5 : ವಿರಾಜಪೇಟೆಯ ಐತಿಹಾಸಿಕ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ.  | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ವಿರಾಜಪೇಟೆಯ ಗೌರಿ, ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು. ಸುಮಾರು 22 ಸಮಿತಿಗಳು ಶೋಭಾಯಾತ್ರೆಯಲ್ಲಿ ಒಂದರ ಹಿಂದೆ ಒಂದು ಆಗಮಿಸಿತು. ಬುಧವಾರ ಬೆಳಗ್ಗೆ ಮೂರ್ತಿಗಳನ್ನು ಗೌರಿಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಉತ್ಸವ ಮುಕ್ತಾಯಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತಿಹಾಸ ಪ್ರಸಿದ್ಧ ವಿರಾಜಪೇಟೆಯ ಗೌರಿ, ಗಣೇಶೋತ್ಸವದ ವೈಭವದ ಶೋಭಾಯಾತ್ರೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು. ಸುಮಾರು 22 ಸಮಿತಿಗಳು ಶೋಭಾಯಾತ್ರೆಯಲ್ಲಿ ಒಂದರ ಹಿಂದೆ ಒಂದು ಆಗಮಿಸಿತು. ಬುಧವಾರ ಬೆಳಗ್ಗೆ ಮೂರ್ತಿಗಳನ್ನು ಗೌರಿಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಉತ್ಸವ ಮುಕ್ತಾಯಗೊಂಡಿತು.

ಅಧಿಕ ಸಂಖ್ಯೆಯಲ್ಲಿ ಜನ ಸಮೂಹ ಉತ್ಸವದಲ್ಲಿ ಭಾಗಿಗಳಾಗಿದ್ದರು. ವಿರಾಜಪೇಟೆಯ ಗಡಿಗಾರ ಕಂಬದ ಬಳಿ ಇರುವ ಗಣೇಶ ದೇವಾಲಯದಲ್ಲಿ ಮೊದಲು ಗೌರಿ, ಗಣೇಶ ಮೂರ್ತಿಯನ್ನು ದೇವಾಲಯದಿಂದ ವಾದ್ಯಗೋಷ್ಠಿ ಸಹಿತ ಹೊರತಂದು ಮಂಟಪದಲ್ಲಿ ಕುಳಿರಿಸಿ ವಿವಿಧ ಪೂಜೆಗಳನ್ನು ನೆರವೇರಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳ ಭಜನಾ ನೃತ್ಯ ಮಂಟಪದ ಶೋಭಾ ಯಾತ್ರೆಗೆ ಹೆಚ್ಚಿನ ಕಳೆ ನೀಡಿತು. ಉಳಿದಂತೆ ವಿರಾಜಪೇಟೆಯ ಮಂಟಪ ಸಮಿತಿಗಳು ಅಲ್ಲಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಗಳನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಇರಿಸುವ ಮೂಲಕ ಶೋಭಾ ಯಾತ್ರೆಯಲ್ಲಿ ಸರದಿ ಸಾಲಿನಲ್ಲಿ ಪಾಲ್ಗೊಂಡಿದ್ದರು.

10ಕ್ಕೂ ಹೆಚ್ಚು ಮಂಟಪಗಳ ಹಿಂಭಾಗ ಡಿ.ಜೆ. ಅಳವಡಿಸಿದ್ದು ಉತ್ಸಾಹಿ ಯುವಕ ಯುವತಿಯರಂತೂ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಇತರ ಮಂಟಪಗಳಲ್ಲಿ ಬ್ಯಾಂಡ್ ಸೆಟ್, ವಾಲಗ, ಡೊಳ್ಳು ಕುಣಿತ, ಭಜನ ನೃತ್ಯ ಅಳವಡಿಸಿಕೊಂಡು ಎಲ್ಲರೂ ಹರ್ಷದಿಂದ ಕುಣಿದು ಸಂಭ್ರಮಿಸಿದರು.

ವರುಣನ ಆಗಮನವಿಲ್ಲದೆ ಪ್ರಶಾಂತವಾದ ಮೋಡದ ನಡುವೆ ಚೆಲುವಿನ ಚಿತ್ತಾರದಂತೆ ಝಗ ಮುಗಿಸಿದ ವಿದ್ಯುತ್ ದೀಪ ಅಲಂಕೃತ ಮಂಟಪಗಳು ನೇರ ರಸ್ತೆಯಲ್ಲಿ ಒಂದರ ಹಿಂದೆ ಒಂದು ಸಾಗಿ ಮಡಿಕೇರಿ ದಸರಾ ಉತ್ಸವದಂತೆ ವಿರಾಜ ಪೇಟೆಯಲ್ಲಿ ಅದ್ದೂರಿ ಗೌರಿ ಗಣೇಶೋತ್ಸವ ಜರುಗಿತು.

ವಿವಿಧ ಸಮಿತಿಗಳು ಅನ್ನ ಸಂತರ್ಪಣೆ ನಡೆಸಿದವು. ಶಾಸಕ ಎ ಎಸ್. ಪೊನ್ನಣ್ಣ ವಿರಾಜಪೇಟೆ ಗೌರಿ ಗಣೇಶ ವಿಸರ್ಜನೋತ್ಸವದಲ್ಲಿ ಪಾಲ್ಗೊಂಡರು.ಈ ಬಾರಿ ರಸಮಂಜರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿತ್ತು. ಕಳೆದ ಹತ್ತು ದಿನಗಳು ಮೂರ್ನಾಡು ರಸ್ತೆಯ ಕಾವೇರಿ ಗೌರಿ ಗಣೇಶ ಉತ್ಸವ ಸಮಿತಿ ಹಾಗೂ ತೆಲುಗರ ಬೀದಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಪ್ರತಿದಿನ ರಾತ್ರಿ ಮನರಂಜನ ಕಾರ್ಯಕ್ರಮ ನಡೆಸಿದ್ದರು. ಕೋಮು ಸೌಹಾರ್ದತೆಯಿಂದ ಅನ್ಯ ಧರ್ಮದವರೂ ಉತ್ಸವದಲ್ಲಿ ಪಾಲ್ಗೊಂಡರು.

ಶ್ರೀ ಬಸವೇಶ್ವರ ದೇವಸ್ಥಾನ ಜೈನರ ಬೀದಿ, ಶ್ರೀ ಮಾಹಾ ಗಣಪತಿ ದೇವಸ್ಥಾನ ಮುಖ್ಯ ರಸ್ತೆ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ, ಶ್ರೀ ವಿನಾಯಕ ಯುವಕ ಭಕ್ತ ಮಂಡಳಿ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ ತೆಲುಗರ ಬೀದಿ, ಶ್ರೀ ವಿಜಯ ವಿನಾಯಕ ಉತ್ಸವ ಸಮಿತಿ ದಖ್ಖನಿ ಮೊಹಲ್ಲಾ, ಶ್ರಿ ನೇತಾಜಿ ಉತ್ಸವ ಸಮಿತಿ ನೆಹರು ನಗರ, ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ, ಶ್ರೀ ಮಾಹಾ ಗಣಪತಿ ಸೇವಾ ಸಂಘ ಗಣಪತಿ ಬೀದಿ ಪಂಜರ್ ಪೇಟೆ, ಶ್ರೀ ವಿನಾಯಕ ಸೇವಾ ಸಮಿತಿ ಪಂಜರ್ ಪೇಟೆ, ಜಲದರ್ಶಿನಿ ವಿನಾಯಕ ಸೇವಾ ಸಮಿತಿ ಆಂಜನೇಯ ದೇವಸ್ಥಾನ ,ಛತ್ರಕೆರೆ, ಶ್ರೀ ಗಣಪತಿ ಸೆವಾ ಸಮಿತಿ ಗಾಂಧಿನಗರ, ವಿಶ್ವ ವಿನಾಯಕ ಸೆವಾ ಸಮಿತಿ ಮುತ್ತಪ್ಪ ದೇವಾಲಯ ಮಲಬಾರ್ ರಸ್ತೆ, ಗೌರಿಕೆರೆ ಶ್ರೀ ಗಣಪತಿ ಉತ್ಸವ ಸಮಿತಿ ಗೌರಿಕೆರೆ, ಶ್ರೀ ವಿಘ್ನೇಶ್ವರ ಉತ್ಸವ ಸಮಿತಿ ಪುರಸಭೆ, ಶ್ರೀ ವರದ ವಿನಾಯಕ ಸೇವ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ, ಶ್ರಿ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿ ಶ್ರೀ ಬಾಲಾಂಜನೇಯ ದೇವಾಲಯ ಅಪ್ಪಯ್ಯ ಸ್ವಾಮಿ ರಸ್ತೆ, ಶ್ರೀ ಸರ್ವ ಸಿದ್ದಿ ವಿನಾಯಕ ಉತ್ಸವ ಸಮಿತಿ ಸುಂಕದಕಟ್ಟೆ, ಕಣ್ಮಣಿ ವಿನಾಯಕ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ, ಶ್ರೀವಿಘ್ನೇಶ್ವರ ಗಣಪತಿ ಸೇವಾ ಸಮಿತಿ ಕೆ. ಬೋಯಿಕೇರಿ ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು.

ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಐ.ಜಿ.ಪಿ. ಬೋರಲಿಂಗಯ್ಯ ನೇತೃತ್ವದಲ್ಲಿ ಕೊಡಗು ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ರಾಮರಾಜನ್, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್, ಜಿಲ್ಲಾ ಮೀಸಲು ಪಡೆ, ಕೆ.ಎಸ್.ಆರ್.ಪಿ 4 ತುಕಡಿಗಳು, ಬಾಂಬ್ ತನಿಖಾ ದಳ, ಶ್ವಾನ ತನಿಖಾ ದಳ, ಆಗ್ನಿ ಶಾಮಕ ದಳ, 8 ವೃತ್ತ ನಿರೀಕ್ಷಕರು, 12 ಪಿ.ಎಸ್.ಐ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ 800 ಮಂದಿ ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!