ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ತಾ.ಪಂ.ಸಾಮರ್ಥ್ಯ ಸೌಧದಲ್ಲಿ ಪೌರ ಕಾರ್ಮಿಕರ ಕುಂದು ಕೊರತೆ ಸಭೆಯು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರ ಅಧ್ಯಕ್ಷತೆಯಲ್ಲಿ ಜರುಗಿತು.ಸಭೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳು ಹಾಗೂ ಅವರಿಗೆ ದೊರಕಬೇಕಾದ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು.ಪೌರ ಕಾರ್ಮಿಕರನ್ನು ಅತ್ಯಂತ ಗೌರವದಿಂದ ಕಾಣಬೇಕು ಹಾಗೂ ಪೌರ ಕಾರ್ಮಿಕರು -ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದ್ದು ಆದ್ದರಿಂದ ಆದ್ಯತೆ ಮೇರೆಗೆ ಹಂತ ಹಂತವಾಗಿ ಪೌರ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.ಪೌರ ಕಾರ್ಮಿಕರ ಕೆಲಸದ ಸಮಯ 8 ಗಂಟೆಗೆ ಸೀಮಿತಗೊಳಿಸಿ, ವೇತನ ಪಾವತಿ ವಿಚಾರದಲ್ಲಿ ಯಾವುದೇ ವಿಳಂಬವಾಗಬಾರದು ಸಕಾಲಕ್ಕೆ ವೇತನ ಪಾವತಿಸಲು ಕ್ರಮವಹಿಸಿ, ಜನಸಂಖ್ಯೆ ಆಧಾರದ ಮೇಲೆ ಪೌರ ಕಾರ್ಮಿಕರ ನೇಮಕಾತಿ, ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದು, ಪೌರ ಕಾರ್ಮಿಕರಿಗೆ ನಿವೇಶನ ಹೀಗೆ ಹಲವಾರು ಬೇಡಿಕೆಗಳನ್ನು ಸಭೆಯಲ್ಲಿ ಸಲ್ಲಿಸಲಾಯಿತು.
ಪೂರಕವಾಗಿ ಮಾತನಾಡಿದ ಶಾಸಕರು ಉತ್ತಮ ಸಮಾಜ ವಾತಾವರಣವನ್ನು ನಿರ್ಮಿಸಲು ಪೌರ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗಿದ್ದು , ಪೌರ ಕಾರ್ಮಿಕ ಕುಟುಂಬಗಳಿಗೆ ಉಚಿತ ಆರೋಗ್ಯ ವಿಮೆಯನ್ನು ಕೈಗೊಳ್ಳಲು ಆದೇಶಿಸಿದರು. ಪೌರ ಕಾರ್ಮಿಕರ ನೇಮಕಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಕೈಗೊಂಡು ನೇರವಾಗಿ ವೇತನವನ್ನು ಪಾವತಿಸಲು ಕ್ರಮವಹಿಸಲು ತಿಳಿಸಿದರು. ಕೆಲಸದ ಸಮಯವನ್ನು 8 ಗಂಟೆಗೆ ಸೀಮಿತಗೊಳಿಸಿ , ಪೌರ ಕಾರ್ಮಿಕರಿಗೆ ಉತ್ತಮ ನಿವೇಶನವನ್ನು ಕೈಗೊಳ್ಳಲು ಸ್ಥಳ ಗುರುತಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ವರ್ಷ ಪೌರ ಕಾರ್ಮಿಕರ ದಿನಾಚರಣೆ ಸೆಪ್ಟೆಂಬರ್ -23 ರಂದು ಅತ್ಯಂತ ವಿಜೃಂಭಣೆಯಿಂದ, ಕ್ರೀಡಾಕೂಟಗಳನ್ನು ಆಯೋಜಿಸಿ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು.ನಂತರ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಮಾತನಾಡಿ 40 ವರ್ಷಗಳ ಸಾರ್ವಜನಿಕ ಸೇವೆಯಲ್ಲಿ ಪೌರ ಕಾರ್ಮಿಕರ ಸಮ್ಮುಖದಲ್ಲಿ ತಾಲೂಕು ಮಟ್ಟದಲ್ಲಿ ಪೌರ ಕಾರ್ಮಿಕರ ಸಭೆ ನಡೆಸಿರುವುದು ಇದೇ ಮೊದಲ ಬಾರಿಗೆ ಇದೊಂದು ಕ್ರಾಂತಿಕಾರಕ ಬದಲಾವಣೆಯಾಗಿದ್ದು ಸಭೆಯಲ್ಲಿ ನಿರ್ಣಯಿಸಿದಂತೆ , ಉಚಿತ ಆರೋಗ್ಯ ವಿಮೆಯು ಮಹತ್ತರವಾದ ನಿರ್ಣಯವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಉಪವಿಭಾಗಧಿಕಾರಿಗಳಾದ ನಿತೀನ್ ಚಕ್ಕಿ, ಅಕ್ರಮ-ಸಕ್ರಮ ಅಧ್ಯಕ್ಷರು, ತಹಸೀಲ್ದಾರ್ ಗಳಾದ ಮೋಹನ್ ಕುಮಾರ್, ಪಿ.ಸಿ.ಪ್ರವೀಣ್ ಕುಮಾರ್,ತಾ.ಪಂ.ಇ.ಒ.ಕೆ.ಸಿ.ಅಪ್ಪಣ್ಣ, ಶೇಖರ್ , ವಿರಾಜಪೇಟೆ/ಪೊನ್ನಂಪೇಟೆ ಮುಖ್ಯಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಗ್ರಾ.ಪಂ. ಅಧ್ಯಕ್ಷರು, ಪೌರಕಾರ್ಮಿಕರು ಹಾಗೂ ಇತರರು ಇದ್ದರು.