ವರ್ಚುವಲ್‌ ತರಗತಿಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲ: ಪ್ರಮೋದ ಮಹಾಲೆ

KannadaprabhaNewsNetwork |  
Published : Jul 06, 2025, 01:48 AM IST
4ಎಚ್.ಎಲ್.ವೈ-1: ಪಟ್ಟಣದ ಸರ್ಕಾರಿ  ಬಾಲಕಿಯರ ಪ್ರೌಢಶಾಲೆಯಲ್ಲಿ ಮಣಿಪಾಲ  ಫೌಂಡೇಶನ್ ವತಿಯಿಂದ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಪ್ರೌಢಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು  ಹಾಗೂ 2024-25 ನೇ ಸಾಲಿನಲ್ಲಿ ವರ್ಚುವಲ್ (ಆನ್ಲೈನ್) ತರಗತಿಗಳನ್ನು ಉತ್ತಮವಾಗಿ ನಡೆಸಿದ ಶಾಲೆಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹಳಿಯಾಳ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಉತ್ತಮ ಫಲಿತಾಂಶ ನೀಡಿದ ಶಾಲೆಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.

ಹಳಿಯಾಳ: ನಮ್ಮ ತಾಲೂಕಿನಲ್ಲಿ ವರ್ಚುವಲ್ ತರಗತಿಗಳು ಉತ್ತಮವಾಗಿ ನಡೆಯುತ್ತಿದ್ದು, ಈ ವರ್ಚುವಲ್ ಮಾದರಿ ಬೋಧನೆಯಲ್ಲಿ ಕೆಲವೊಂದು ಕಠಿಣ ವಿಷಯಗಳನ್ನು 3ಡಿ ಮಾದರಿಯಲ್ಲಿ ವಿಶ್ಲೇಷಣೆ ಮಾಡಿ ತಿಳಿಸುತ್ತಿರುವುದರಿಂದ, ಮಕ್ಕಳಿಗೆ ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಸರಳವಾಗಿ ಉತ್ತರಿಸಲು ಬಹಳ ಸಹಾಯಕವಾಗಿದೆ ಎಂದು ಹಳಿಯಾಳ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಉತ್ತಮ ಫಲಿತಾಂಶ ನೀಡಿದ ಶಾಲೆಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕ ಆರ್‌.ವಿ. ದೇಶಪಾಂಡೆ ಅವರ ಶೈಕ್ಷಣಿಕ ಕಾಳಜಿಯ ಪರಿಣಾಮ ಹಳಿಯಾಳ ತಾಲೂಕು ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಾರಂಭಿಸಿದೆ ಎಂದು ಹೇಳಿದರು.

ವಿಆರ್‌ಡಿಎಂ ಟ್ರಸ್ಟ್‌ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ಖಾಸಗಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳಿಗಿಂತ ಉತ್ತಮ ಸೌಲಭ್ಯಗಳು ಈಗ ಸರ್ಕಾರಿ ಶಾಲೆಗಳಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಶಾಸಕರು ಶಿಕ್ಷಣ ಕ್ಷೇತ್ರಕ್ಕಾಗಿ ಸಾಕಷ್ಟು ಅನುದಾನ ತರುತ್ತಿದ್ದಾರೆ. ಮಧ್ಯಮ ಮತ್ತು ಬಡ ಕುಟುಂಬಗಳಿಂದ ಬಂದ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಶೈಕ್ಷಣಿಕ ಸೌಲಭ್ಯಗಳು ದೊರೆಯಲಾರಂಭಿಸಿದ ಪರಿಣಾಮ ಅವರಿಗೂ ಸಾಧನೆ ಮಾಡಲು ಸ್ಫೂರ್ತಿಯಾಗುತ್ತಿದೆ ಎಂದರು.

ಸನ್ಮಾನ: ಮಣಿಪಾಲ ಫೌಂಡೇಶನ್, ಶ್ರೀ ಕಾರ್ಕಳ ಕುಮಾರಂಗನಾಥ ಪೈ ಮೆಮೋರಿಯಲ್ ಟ್ರಸ್ಟ್, ಮಾಹಾಮಾಯಾ ಫೌಂಡೇಶನ್ ಹಾಗೂ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಪ್ರೌಢಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕನ್ನಡ ಮಾಧ್ಯಮದ ಕ್ಲಸ್ಟರ್ ಹಂತದಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಪ್ರೌಢಶಾಲೆ ತೇರಗಾಂವದ ವಿದ್ಯಾರ್ಥಿನಿ ಮಂಗಲಾ ಜೀನಪ್ಪ ಕರಡಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ₹2000ಗಳ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

2024-25ನೇ ಸಾಲಿನಲ್ಲಿ ವರ್ಚುವಲ್‌ (ಆನ್‌ಲೈನ್‌) ತರಗತಿಗಳನ್ನು ಉತ್ತಮವಾಗಿ ನಡೆಸಿದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ಹಳಿಯಾಳ), ಅಟಲ್ ಬಿಹಾರಿ ವಾಜಪೇಯಿ ಶಾಲೆ (ಮದ್ನಳ್ಳಿ), ಸರ್ಕಾರಿ ಪ್ರೌಢಶಾಲೆ (ಸಾಂಬ್ರಾಣಿ), ಸರ್ಕಾರಿ ಪಪೂ. ಕಾಲೇಜು (ಹಳೆ ದಾಂಡೇಲಿ) ಶಾಲೆಗಳಿಗೆ ಗೌರವಿಸಲಾಯಿತು.

ಮಣಿಪಾಲ ಫೌಂಡೇಶನ್‌ನ ಉಷಾ ಪೈ, ಶಾಲಿನಿ, ಜೋಯಿಡಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಸೀರ್ ಅಹ್ಮದ ಶೇಖ್ ಇದ್ದರು. ವಿದ್ಯಾರ್ಥಿ ಪ್ರತಿನಿಧಿಗಳಾದ ವಿನಯಾ ಕೆ. ಸರೇಕರ್, ಶರಧಿ ಉಡುಪಿ ಹಾಗೂ ತನುಜಾ ಮೊರಿ ಕಾರ್ಯಕ್ರಮ ನಿರೂಪಿಸಿದರು.

PREV