ಮಳೆ ಕೈಕೊಟ್ಟ ಹೊತ್ತಲ್ಲೇ ವೈರಸ್‌ ದಾಳಿ

KannadaprabhaNewsNetwork |  
Published : Jul 03, 2026, 02:45 AM IST
ಫೋಟೊ1ಕೆಎಸಟಿ2ಕುಷ್ಟಗಿ ಪಟ್ಟಣದ ಸಮೀಪದ ಹೊಲದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಹೆಸರು ಬೆಳೆ. | Kannada Prabha

ಸಾರಾಂಶ

ಮುಂಗಾರು ಆರಂಭದಲ್ಲಿ ಸುರಿದ ಮಳೆಯೇ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು

ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ

ಮೋಡ ಕವಿದರೂ ಮಳೆಯಿಲ್ಲ, ಮತ್ತೊಂದೆಡೆ ಹಚ್ಚ ಹಸಿರಾಗಿ ನಳನಳಿಸುತ್ತಿದ್ದ ಹೆಸರು ಬೆಳೆ ಕಣ್ಣೆದುರೇ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಉತ್ತಮ ಇಳುವರಿಯ ಕನಸು ಕಂಡಿದ್ದ ರೈತರು ಈಗ ನಷ್ಟದ ಲೆಕ್ಕ ಹಾಕುವ ಸ್ಥಿತಿಗೆ ತಲುಪಿದ್ದಾರೆ.

ಮುಂಗಾರು ಆರಂಭದಲ್ಲಿ ಸುರಿದ ಅಲ್ಪ ಮಳೆ ನಂಬಿ ಬಿತ್ತನೆ ಮಾಡಿದ್ದ ಹೆಸರು ಬೆಳೆಗೆ ಈಗ ಮಳೆ ಕೊರತೆಯ ಜತೆಗೆ ಹಳದಿ ನಂಜಾಣು ರೋಗ ಕಂಟಕವಾಗಿ ಪರಿಣಮಿಸಿದ್ದು, ರೈತರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಹನುಮಸಾಗರ, ಹನುಮನಾಳ, ತಾವರಗೇರಾ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಬೆಳೆದಿರುವ ಹೆಸರು ಬೆಳೆ ಈಗ ಹಳದಿ ರೋಗದ ದಾಳಿಗೆ ತುತ್ತಾಗುತ್ತಿದೆ. ಆರಂಭದಲ್ಲಿ ಕೆಲವೇ ಗಿಡಗಳಲ್ಲಿ ಕಾಣಿಸಿಕೊಂಡಿದ್ದ ರೋಗ, ಬಿಳಿನೊಣಗಳ ಮೂಲಕ ಕ್ಷಿಪ್ರವಾಗಿ ಹರಡಿ ಹೊಲದಿಂದ ಹೊಲಕ್ಕೆ ವ್ಯಾಪಿಸುತ್ತಿದೆ. ಎಲೆಗಳ ಮೇಲೆ ಹಳದಿ ಮಚ್ಚೆ ಕಾಣಿಸಿಕೊಂಡ ಬಳಿಕ ಸಂಪೂರ್ಣ ಗಿಡವೇ ಹಳದಿ ಬಣ್ಣಕ್ಕೆ ತಿರುಗಿ ಬೆಳವಣಿಗೆ ಕುಂಠಿತವಾಗುತ್ತದೆ.

ಮಳೆ ಕೊರತೆ ಗಾಯದ ಮೇಲೆ ಬರೆ: ಮುಂಗಾರು ಆರಂಭದಲ್ಲಿ ಸುರಿದ ಮಳೆಯೇ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಮಳೆ ಬಾರದ ಕಾರಣ ಹೊಲಗಳಲ್ಲಿ ತೇವಾಂಶ ಸಂಪೂರ್ಣ ಕಡಿಮೆಯಾಗಿದೆ. ಮಣ್ಣಿನಲ್ಲಿ ಬಿರುಕು ಮೂಡಿದ್ದು, ಗಿಡಗಳು ನೀರಿನ ಕೊರತೆಯಿಂದ ಬಾಡುತ್ತಿವೆ. ಇಂತಹ ದುರ್ಬಲ ಪರಿಸ್ಥಿತಿಯಲ್ಲೇ ವೈರಸ್ ದಾಳಿ ನಡೆಸಿರುವುದರಿಂದ ಬೆಳೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ.

ಕೆಲ ರೈತರು ಬಾಡಿಗೆ ಬೋರ್‌ವೆಲ್‌, ಟ್ಯಾಂಕರ್ ಮೂಲಕ ನೀರುಣಿಸಲು ಹರಸಾಹಸ ಪಡುತ್ತಿದ್ದರೂ ಬಹುತೇಕ ರೈತರಿಗೆ ಆ ಅವಕಾಶವೂ ಇಲ್ಲ. ಮಳೆಯನ್ನೇ ನಂಬಿರುವ ರೈತರು ಮತ್ತೆ ಆಕಾಶದತ್ತ ಆಶಾಭಾವದಿಂದ ನೋಡುವಂತಾಗಿದೆ.

ಸಾಲದ ಹಣವೂ ಮರಳದ ಆತಂಕ: ಬೀಜ, ಗೊಬ್ಬರ, ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಔಷಧ ಸಿಂಪಡಣೆ ಸೇರಿದಂತೆ ಪ್ರತಿ ಎಕರೆಗೆ ಸಾವಿರಾರು ಹೂಡಿಕೆ ಮಾಡಲಾಗಿದೆ. ಉತ್ತಮ ಬೆಲೆ ಮತ್ತು ಉತ್ತಮ ಇಳುವರಿ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅನೇಕ ರೈತರು ಸಾಲ ಮಾಡಿ ಕೃಷಿ ಕೈಗೊಂಡಿದ್ದಾರೆ. ಆದರೆ ಈಗ ಮಳೆ ಕೊರತೆ ಮತ್ತು ಹಳದಿ ರೋಗದ ಹೊಡೆತದಿಂದ ಇಳುವರಿ ಕುಸಿಯುವ ಲಕ್ಷಣ ಸ್ಪಷ್ಟವಾಗಿದ್ದು, ಸೂಕ್ತ ಪರಿಹಾರ ಒದಗಿಸುವ ಕೆಲಸ ಸರ್ಕಾರ ಮಾಡಬೇಕಿದೆ.

ಹೆಚ್ಚಿನ ಹೊಲಗಳಲ್ಲಿ ಗಿಡಗಳು ಹೂ ಬಿಡುವ ಹಂತದಲ್ಲೇ ಒಣಗುತ್ತಿದ್ದು, ಇದರಿಂದ ಉತ್ಪಾದನೆ ಮಾತ್ರವಲ್ಲ, ಕಾಳಿನ ಗುಣಮಟ್ಟವೂ ಕುಸಿಯುವ ಸಾಧ್ಯತೆ ಇದೆ. ರೈತರು ಮಾಡಿದ ಹೂಡಿಕೆ ವಾಪಸ್ ಬರುತ್ತದೆಯೇ ಎಂಬ ಚಿಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ವೈರಸ್‌ ವೇಗದ ಹರಡುವಿಕೆ: ಕೃಷಿ ತಜ್ಞರ ಪ್ರಕಾರ ಹಳದಿ ರೋಗವು ವೈರಸ್‌ನಿಂದ ಉಂಟಾಗುತ್ತದೆ. ಬಿಳಿನೊಣದಂತಹ ರಸ ಹೀರುವ ಕೀಟ ಈ ವೈರಸ್ ಅನ್ನು ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡಿಸುತ್ತವೆ. ಆರಂಭಿಕ ಹಂತದಲ್ಲೇ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಇಡೀ ಹೊಲವೇ ಸೋಂಕಿಗೆ ಒಳಗಾಗುವ ಅಪಾಯವಿದೆ.

ಕೃಷಿ ಇಲಾಖೆ ಸಲಹೆ: ರೋಗ ಬಾಧಿತ ಸಸ್ಯ ಆರಂಭಿಕ ಹಂತದಲ್ಲೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ಬೀಜ ಇಮಿಡಾಕ್ಲೋಪ್ರಿಡ್ 600 ಎಫ್.ಎಸ್. ಔಷಧ ಪ್ರತಿ ಕೆಜಿ ಬೀಜಕ್ಕೆ 5 ಮಿಲೀ ಪ್ರಮಾಣದಲ್ಲಿ ಬಳಸಿ ಬೀಜೋಪಚಾರ ಮಾಡಬೇಕು. ಹೊಲದ ಸುತ್ತಮುತ್ತ ಹಾಗೂ ಬದುಗಳಲ್ಲಿ ಜೋಳ ಅಥವಾ ಸಜ್ಜೆ ಬೆಳೆಗಳನ್ನು ತಡೆ ಬೆಳೆಗಳಾಗಿ ಬೆಳೆಸುವುದರಿಂದ ಕೀಟಗಳ ಹಾವಳಿ ಕಡಿಮೆಯಾಗುತ್ತದೆ.

ಕ್ರೋಟಾನ್ (ಸೀಮೆಎಣ್ಣೆ ಗಿಡ), ಯುಪೊರ್ಬಿಯಾ (ಬೀದಿ ಸೊಪ್ಪು), ಮ್ಯಾಲ್ವ್ಯಾಸ್ಟಮ್ (ಸಣ್ಣ ಬಿಂದಿಗೆ ಗಿಡ), ಪೈಲಾಂತಸ್ (ಮದ್ರಾಸ್ ನೆಲ್ಲಿ) ಹಾಗೂ ಅಕ್ಕಾಲೀಪಾ (ಮುಳ್ಳು ಹೊನೆ ಗೊನೆ) ಗಳನ್ನು ಹೊಲದಿಂದ ತೆಗೆದು ಸುಟ್ಟು ಹಾಕಬೇಕು.

ಬಿತ್ತಿದ 3 ರಿಂದ 4 ವಾರಗಳ ನಂತರ ಡೈಫೆಂಥಿಯುರಾನ್ 50 ಡಬ್ಲ್ಯೂಪಿ ಔಷಧವನ್ನು 1 ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಬೇವಿನ ಕಷಾಯ 5 ಮಿಲೀ/ಲೀಟರ್ ಪ್ರಮಾಣದಲ್ಲಿ ಬೆರೆಸಿ 7 ದಿನಗಳ ಅಂತರದಲ್ಲಿ ಸಿಂಪಡಿಸುವದು ಸೇರಿದಂತೆ ನಿಯಂತ್ರಣ ಕ್ರಮ ಕೈಗೊಳ್ಳುವದರಿಂದ ರೋಗ ನಿಯಂತ್ರಣಕ್ಕೆ ತರಬಹುದು.

ಕುಷ್ಟಗಿ ತಾಲೂಕಿನಲ್ಲಿ 3680 ಹೆಕ್ಟೇರ್ ಹೆಸರು ಬೆಳೆ ಬಿತ್ತನೆ ಮಾಡಲಾಗಿದ್ದು, ಹಳದಿ ರೋಗ ಕಂಡು ಬಂದ ಕೂಡಲೇ ಸೋಂಕಿತ ಗಿಡ ತೆಗೆದು ನಾಶಪಡಿಸಬೇಕು. ಬಿಳಿನೊಣ ನಿಯಂತ್ರಣಕ್ಕೆ ಶಿಫಾರಸು ಮಾಡಿದ ಔಷಧ ಸಿಂಪಡಿಸಿದರೆ ರೋಗದ ಹರಡುವಿಕೆ ತಡೆಯಬಹುದು. ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳಬೇಕು ಎಂದು ರಾಜಶೇಖರಗೌಡ ಕುಷ್ಟಗಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗಿನಾದ್ಯಂತ ಬಿರುಸು ಪಡೆದ ಮಳೆ
ಮಾದಕ ವಸ್ತು ವಿರೋಧಿ ದಿನ ಆಚರಣೆ