ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ವಿಸಾಜಿಯವರ ಕೊಡುಗೆ ಅಪಾರ

KannadaprabhaNewsNetwork |  
Published : Sep 24, 2024, 01:46 AM IST
ಚಿತ್ರ 23ಬಿಡಿಆರ್54 | Kannada Prabha

ಸಾರಾಂಶ

ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗುರುಬಸವ ಪಟ್ಟದ್ದೇವರು, ಡಾ.ವೈಜಿನಾಥ ಭಂಡೆ, ನಾಗಭೂಷಣ ಮಾಮಡಿ, ಡಾ.ವಿಕ್ರಮ ವಿಸಾಜಿ, ಬಸವರಾಜ ಮರೆ, ಬಂಡೆಪ್ಪ ಶರಣರು ಇದ್ದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಗಡಿ ಭಾಗದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ಕೊಡುಗೆ ಅಪಾರವಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಭಾನುವಾರ ಆಯೋಜಿಸಿದ್ದ 303ನೇ ಮಾಸಿಕ ಶರಣ ಸಂಗಮ ಮತ್ತು ಹಿರಿಯ ಸಾಹಿತಿ ಡಾ.ಜಿ.ಬಿ.ವಿಸಾಜಿ ಅವರ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಚನ್ನಬಸವ ಪಟ್ಟದ್ದೇವರು ಮತ್ತು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಜತೆಗೂಡಿ ಕನ್ನಡದ ಕಾರ್ಯಗಳನ್ನು ಮಾಡಿದ್ದರು ಎಂದರು.

ವಿಸಾಜಿಯವರು ಅಧ್ಯಾಪಕರಾಗಿ, ಕನ್ನಡದ ವಾತಾವರಣ ನಿರ್ಮಾಣ ಮಾಡಿದ್ದರು. ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಡಾ.ವಿಸಾಜಿ ಅವರು ಮೊದಲ ಸಾಹಿತ್ಯ ಕೃತಿ ಹೊರ ತಂದಿದ್ದರು. ಅವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜತೆಗೆ ವಚನ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ಅಪಾರ ಶಿಷ್ಯ ಬಳಗ ಹೊಂದಿರುವ ವಿಸಾಜಿ ಅವರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ಅವರ ಪುತ್ರ ಡಾ.ವಿಕ್ರಮ ವಿಸಾಜಿ ಅವರು ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೃಷಿ ಮಾಡುತ್ತಿರುವುದು ಹೆಮ್ಮೆ ತರಿಸಿದೆ ಎಂದು ಹೇಳಿದರು.

ಗುರುಮಠಕಲ್ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಹಿರೇಮಠ ಸಂಸ್ಥಾನ ನಿರಂತರವಾಗಿ ಶರಣ ಸಂಸ್ಕೃತಿ ಪಸರಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಡಾ.ವೈಜಿನಾಥ ಭಂಡೆ, ಡಾ.ಚಂದ್ರಶೇಖರ ಬಿರಾದಾರ್, ಡಾ.ಭೀಮಾಶಂಕರ ಬಿರಾದಾರ್, ಡಾ.ವಿಕ್ರಮ ವಿಸಾಜಿ ಅವರು ಡಾ.ಜಿ.ಬಿ.ವಿಸಾಜಿ ಅವರ ಕುರಿತು ಮಾತನಾಡಿದರು.

ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಬಸವ ಗುರುವಿನ ಪೂಜೆ ನೆರವೇರಿಸಿದರು. ಎಂ.ಬಂಡೆಪ್ಪ ಶರಣರು ಧರ್ಮಗ್ರಂಥ ಪಠಣ ಮಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆ ವಹಿಸಿದರು.

ಈ ವೇಳೆ ಶರಣಯ್ಯ ಮಠಪತಿ, ವಿಶ್ವನಾಥಪ್ಪ ಬಿರಾದಾರ, ಬಸವರಾಜ ಮರೆ, ಓಂಪ್ರಕಾಶ ರೊಟ್ಟೆ, ಚನ್ನಬಸವ ವಿಸಾಜಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!