ನಗರದಲ್ಲಿ ಮುಂದಿನ ತಿಂಗಳಿನಿಂದ ಇ-ಖಾತಾ

KannadaprabhaNewsNetwork | Published : Sep 24, 2024 1:46 AM

ಸಾರಾಂಶ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ನಿವೇಶನ ನೋಂದಣಿ ಡಿಜಟಲೀಕರಣವಾಗಲಿದ್ದು, ಮಧ್ಯವರ್ತಿಗಳು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಿನ ತಿಂಗಳಿನಿಂದ ಕಡ್ಡಾಯವಾಗಿ ಇ-ಖಾತೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ನಿವೇಶನ ನೋಂದಣಿ ಡಿಜಟಲೀಕರಣವಾಗಲಿದ್ದು, ಮಧ್ಯವರ್ತಿಗಳು ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಿನ ತಿಂಗಳಿನಿಂದ ಕಡ್ಡಾಯವಾಗಿ ಇ-ಖಾತೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚನೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನ ನೋಂದಣಿ ಮಾಡಬೇಕಾದರೆ ಖಾತೆ ಡಿಜಿಟಲೀಕರಣವಾಗಿರಬೇಕು. ಇ-ಖಾತೆಯಾಗಿದ್ದರೆ ಮಾತ್ರ ನೋಂದಣಿ ಮಾಡಲಾಗುವುದು. ಅಕ್ರಮಗಳಿಗೆ ಕಡಿವಾಣ ಹಾಕಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ಪೇಪರ್‌ನಲ್ಲಿ ಖಾತೆ ಮುದ್ರಿಸಿ ನೋಂದಣಿ ಮಾಡಿಸಲಾಗುತ್ತಿದೆ. ಇದರಿಂದ ಬೋಗಸ್‌ ಖಾತೆ ಸೃಷ್ಟಿಸಿ ನೋಂದಣಿ ಮಾಡುತ್ತಿರುವುದು ಗೊತ್ತಾಗಿದೆ. ಪೇಪರ್‌ ಖಾತೆಯಲ್ಲಿ ನೋಂದಣಿ ಮಾಡುವಾಗ ಇತರೆ ಎಂಬ ವರ್ಗೀಕರಣವನ್ನು ಆಯ್ಕೆ ಮಾಡಲಾಗುತ್ತದೆ. ಇತರೆ ವರ್ಗೀಕರಣದಲ್ಲಿ ಆಶ್ರಯ ಯೋಜನೆ ಸೇರಿದಂತೆ ಇತರೆ ಯೋಜನೆಗಳಡಿ ನೋಂದಣಿ ಮಾಡಲಾಗುತ್ತದೆ. ಇಲ್ಲಿ ಕಡಿಮೆ ಬೆಲೆಯಲ್ಲಿ ನೋಂದಣಿ ಆಗುವುದರಿಂದ ಇತರೆ ವರ್ಗೀಕರಣವನ್ನು ತೋರಿಸಿ ವರ್ಗೀಕರಣ ಮಾಡಲಾಗುತ್ತಿದೆ. ಇದರಿಂದ ಸರ್ಕಾರ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಇದನ್ನು ತಡೆಯುವ ದೃಷ್ಟಿಯಿಂದ ಈ ಕ್ರಮ ಅನುಸರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಈ ಹಿಂದೆ ನಡೆಸಿದ ಅಧ್ಯಯನದ ವರದಿ ಪ್ರಕಾರ, ನಕಲಿ ಖಾಲಿ ಖಾತೆ ಮೂಲಕ ನೋಂದಣಿ ಮಾಡುತ್ತಿರುವುದು ಗೊತ್ತಾಗಿದೆ. ನಾಲ್ಕು ನೋಂದಣಿ ಕಚೇರಿಗಳನ್ನು ಆಯ್ಕೆ ಮಾಡಿ ಗಮನಿಸಿದಾಗ 1-7-2018 ರಿಂದ 10-12-2019ರ ಅವಧಿಯಲ್ಲಿ 250 ಕೋಟಿ ರು. ನಷ್ಟವಾಗಿರುವುದು ಗೊತ್ತಾಗಿದೆ. ಈಗ ಇದು ₹500 ಕೋಟಿಗಿಂತ ಹೆಚ್ಚಳವಾಗಿರಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯತೆ ಇರುವ ಕಾರಣ ಇ-ಖಾತಾ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ, ಪುರಸಭೆ, ಬಿಬಿಎಂಪಿ, ಬಿಡಿಎ ಸೇರಿದಂತೆ ಎಲ್ಲಾ ಕಡೆಯೂ ಖಾತೆ ಡಿಜಿಟಲೀಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಜಾರಿ ಮಾಡಿದ್ದು, ಇದೀಗ ಮತ್ತೆ ಎಂಟು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಒಟ್ಟು 12 ಜಿಲ್ಲೆಗಳಲ್ಲಿ ಡಿಜಿಟಲ್ ಖಾತೆ ಇದ್ದರೆ ಮಾತ್ರ ನೋಂದಣಿ ಮಾಡಲಾಗುತ್ತದೆ. ಫೆಬ್ರವರಿಯಿಂದ ಖಾತೆಯನ್ನು ಡಿಜಿಟಲೀಕರಣ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೇಂದ್ರದ ಅಂಗಳದಲ್ಲಿ ಮಸೂದೆ

ಖಾತೆಯನ್ನು ಡಿಜಿಟಲೀಕರಣ ಮಾಡುವ ಸಂಬಂಧ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಕಳೆದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ಸ್ಪಷ್ಟೀಕರಣ ಕೋರಿ ವಾಪಸು ಕಳುಹಿಸಿದ್ದರು. ಕೆಲ ಸ್ಪಷ್ಟನೆ ನೀಡಿ ರಾಜ್ಯಪಾಲರ ಅಂಕಿತಕ್ಕೆ ಮತ್ತೆ ಕಳುಹಿಸಿದ್ದೆವು. ಆದರೆ ಮತ್ತೆ ರಾಜ್ಯಪಾಲರು ವಿವರಣೆ ಕೋರಿ ಮಸೂದೆ ವಾಪಸು ಕಳುಹಿಸಿದ್ದರು. ಬಳಿಕ ಸರ್ಕಾರವು ಸುದೀರ್ಘ ಸ್ಪಷ್ಟೀಕರಣ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಲಾಯಿತು. ರಾಜ್ಯಪಾಲರು ಈಗ ಮಸೂದೆಗೆ ಅಂಕಿತ ಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.

Share this article