ಸಾಲದ ಸುಳಿಯಲ್ಲಿ ಶ್ರಮಿಕ ವರ್ಗ: ಗಿರೀಶ್ ಮಟ್ಟಣ್ಣನವರ್

KannadaprabhaNewsNetwork | Published : Sep 24, 2024 1:46 AM

ಸಾರಾಂಶ

ಮಳವಳ್ಳಿಯಲ್ಲಿ ಧರ್ಮಸ್ಥಳ ಸಂಘದವರಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಹಾಲಕ್ಷ್ಮಿ ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕು. ಅಲ್ಲದೇ, ಆತ್ಮಹತ್ಯೆ ಮತ್ತು ವಾರದ ಬಡ್ಡಿ ಕಿರುಕುಳದ ಹೊಣೆಯನ್ನು ವೀರೇಂದ್ರ ಹೆಗ್ಗಡೆ ಅವರೇ ವಹಿಸಿಕೊಂಡು ಪರಿಹಾರ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂಧೆ ರಾಜ್ಯದ ದುಡಿಯುವ ಶ್ರಮಿಕ ವರ್ಗವನ್ನು ಸಾಲದ ಸುಳಿಯ ಮೃತ್ಯು ಕೂಪದಲ್ಲಿ ಸಿಲುಕಿಸಿದೆ ಎಂದು ಸಾಮಾಜಿಕ ಹೋರಾಟಗಾರ ಗಿರೀಶ್‌ ಮಟ್ಟಣ್ಣನವರ್ ಆರೋಪಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಎಂಬ ಸಂಸ್ಥೆ ಅಭಿವೃದ್ಧಿ ಹೆಸರಲ್ಲಿ ನಡೆಸುತ್ತಿರುವ ಕಾನೂನು ಬಾಹಿರ ಹಣದ ಲೇವಾ ದೇವಿ ಚಟುವಟಿಕೆಗಳು ಹಲವು ಅನುಮಾನ ಹುಟ್ಟು ಹಾಕಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮಳವಳ್ಳಿಯಲ್ಲಿ ಧರ್ಮಸ್ಥಳ ಸಂಘದವರಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಮಹಾಲಕ್ಷ್ಮಿ ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕು. ಅಲ್ಲದೇ, ಆತ್ಮಹತ್ಯೆ ಮತ್ತು ವಾರದ ಬಡ್ಡಿ ಕಿರುಕುಳದ ಹೊಣೆಯನ್ನು ವೀರೇಂದ್ರ ಹೆಗ್ಗಡೆ ಅವರೇ ವಹಿಸಿಕೊಂಡು ಪರಿಹಾರ ನೀಡುವಂತೆ ಒತ್ತಾಯಿಸಿದರು.

ಹೆಗ್ಗಡೆ ಕುಟುಂಬದ ಅಕ್ರಮಗಳನ್ನು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಕೊಲೆಗಡುಕನ, ಅಕ್ರಮ ಬಡ್ಡಿ ದಂದೆ ವಿರುದ್ಧ ಮಹೇಶ ಶೆಟ್ಟಿ ತಿಮರೋಡಿ ಮತ್ತು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಸ್ಥಳೀಯ ಸಂಘಗಳು ಜನ ಜಾಗೃತಿ ಮಾಡುತ್ತಾ ಬಂದಿವೆ. ಆದರೆ, ಅಧಿಕಾರಿಗಳು, ರಾಜಕೀಯ ವ್ಯವಸ್ಥೆಗಳು ನ್ಯಾಯಾಂಗ ಕುರುಡಾಗಿರುವುದರಿಂದ ಇಡೀ ರಾಜ್ಯ ಧರ್ಮೋದ್ಯಮಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಎಸ್‌ಕೆಡಿಆರ್‌ಡಿಪಿ ನಡೆಸುತ್ತಿದೆ ಎಂದು ಹೇಳಲಾಗುವ ಸ್ವಸಹಾಯ ಸಂಘದ ಸದಸ್ಯರಿಗೆ ಇದುವರೆಗೂ ತಮ್ಮ ಸಂಘದ ನೋಂದಣಿ ಪ್ರತಿ ನೀಡಿಲ್ಲವೇಕೆ?, ಸಂಘದ ನೀತಿ ನಿಯಮಗಳನ್ನು ಅರಿತುಕೊಳ್ಳುವುದು ಸದಸ್ಯರ ಹಕ್ಕಲ್ಲವೇ? ಎಂದರಲ್ಲದೆ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆ ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡುತ್ತಿರುವುದಾಗಿ ಸಂಸ್ಥೆ ಹೇಳುತ್ತದೆ. ಆದರೆ, ಇದುವರೆಗೂ ಎಸ್‌ಕೆಡಿಆರ್‌ಡಿಪಿ ಮುಖ್ಯಸ್ಥರು ಮತ್ತು ಬ್ಯಾಂಕ್ ನಡುವೆ ಆದ ಒಪ್ಪಂದದ ಪ್ರತಿಯನ್ನು ಪ್ರತಿ ವಾರ ಬಡ್ಡಿ ಕಟ್ಟುವ ಸದಸ್ಯರ ಗಮನಕ್ಕೆ ಏಕೆ ತರುತ್ತಿಲ್ಲ?, ಬ್ಯಾಂಕ್ ಬಡ್ಡಿ ದರ ಎಷ್ಟು?, ಕಮಿಷನ್ ಎಷ್ಟು? ಈ ಕುರಿತು ಪಾರದರ್ಶಕತೆ ಏಕಿಲ್ಲ ಎಂದು ಪ್ರಶ್ನಿಸಿದರು.

ಸಂಸ್ಥೆಯ ಹಣದ ವಹಿವಾಟಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಾರ್ವಜನಿಕರ ಗಮನಕ್ಕೆ ತರಲೇಬೇಕು. ಅಲ್ಲಿಯವರೆಗೆ ಯಾವ ಸದಸ್ಯರು ವಾರದ ಸಾಲ ಅಥವಾ ಬಡ್ಡಿ ಕಟ್ಟಬಾರದು. ಈ ಕುರಿತು ಪ್ರತಿ ಜಿಲ್ಲೆಯಲ್ಲಿ ಅಕ್ರಮ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಹಾಯವಾಣಿ ತೆರೆಯಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಮಹೇಶ್ ತಿಮರೋಡಿ, ಹೋರಾಟಗಾರರಾದ ಪ್ರಸನ್ನ ರವಿ, ಬಂಡೂರು ಸಿದ್ದರಾಜು, ಮಲ್ಲು, ಜಯಂತ್ ಪಿ, ಮಹೇಶ್ ಉಪಸ್ಥಿತರಿದ್ದರು.

Share this article