ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಡಾ.ರಾಜ್ ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಮೈಸೂರು ಜಯರಾಂ ಅವರ ನೇತೃತ್ವದಲ್ಲಿ 4ನೇ ವಿಷ್ಣು ಸಂಭ್ರಮ ಸಂಗೀತ ಸಂಜೆ ನೈಜ ವಾದ್ಯಗಳ (ಲೈವ್ ಮ್ಯೂಸಿಕ್) ಕಾರ್ಯಕ್ರಮ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.ಸುಂದರವಾದ ದೀಪಾಲಂಕಾರ, ಉತ್ತಮ ವೇದಿಕೆ, ಒಳ್ಳೆಯ ಗುಣಮಟ್ಟದ ಧ್ವನಿವರ್ಧಕ ಹಾಗೂ ತುಂಬಿದ ಸಭಾಂಗಣದಲ್ಲಿ ಅತಿ ಹೆಚ್ಚು ಪ್ರೇಕ್ಷಕರಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕಲಾವಿದರು ಡಾ. ವಿಷ್ಣುವರ್ಧನ್ ಅಭಿನಯಿಸಿರುವ ಚಲನಚಿತ್ರಗೀತೆಗಳನ್ನು ಹಾಡಿ ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದ ಮನರಂಜನೆ ನೀಡಿದರು.
ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳ್ಳೈ ಆಳ್ವಾರ್ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ್ ವಿ. ಭೈರಿ ವಹಿಸಿದ್ದರು.
ಸರ್ವಮಂಗಳ ಅವರು ಪ್ರಾರ್ಥನೆ ಸಲ್ಲಿಸಿ, ಸಂಗೀತ ಕಾಂರ್ಕ್ರಮಕ್ಕೆ ಚಾಲನೆ ನೀಡಿದರು. ನಂತರ ತಂಡದ ಕಲಾವಿದರಿಂದ ಸುಪ್ರಭಾತ ಚಿತ್ರದ ಹಾಡನ್ನು ಜಗದೀಶ್, ಬಂಧನ ಚಿತ್ರದ ಯುಗಳ ಗೀತೆಯನ್ನು ಚಂದ್ರಶೇಖರ್ ಹಾಗೂ ಅಶ್ವಿನಿ ಶಾಸ್ತ್ರಿ, ಕೋಟಿಗೊಬ್ಬ ಚಿತ್ರದ ಹಾಡನ್ನು ರಾಮಚಂದ್ರು ಹಾಗೂ ಸಂಗಡಿಗರು, ಸಿಂಹಾದ್ರಿಯ ಸಿಂಹ ಚಿತ್ರದ ಗೀತೆಯನ್ನು ಅನಿತಾ ಹಾಗೂ ನಂದಕುಮಾರ್, ಕದಂಬ ಚಿತ್ರದ ಸಂಗಾತಿಯೇ, ಜೀವನದಿ, ಎಲ್ಲೋ ಯಾರೋ ಹೇಗೋ ಈ ಗೀತೆಗಳನ್ನು ಮೈಸೂರು ಜಯರಾಂ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಮಾಜಿ ಶಾಸಕ ಬಾಲರಾಜ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹಿರಿಯ ಸಂಸ್ಕೃತಿ ಚಿಂತಕ ಕೆ. ರಘುರಾಂ ವಾಜಪೇಯಿ, ಉದ್ಯಮಿ ರವಿಗೌಡ, ಡಾ.ವೈ.ಡಿ. ರಾಜಣ್ಣ, ಸಮಾಜ ಸೇವಕಿ ಲತಾ ಬಾಲಕೃಷ್ಣ, ದೇವಪ್ರಕಾಶ್, ನಿವೃತ್ತ ರೇಲ್ವೆ ಅಧಿಕಾರಿ ಓಂಪ್ರಕಾಶ್, ಹಿರಿಯ ಬಿಜೆಪಿ ಮುಖಂಡ ಗೋಪಾಲರಾವ್ ಇದ್ದರು.