ಅರಳುಮಲ್ಲಿಗೆ ಪಾರ್ಥಸಾರಥಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ

KannadaprabhaNewsNetwork | Published : Sep 11, 2024 1:03 AM

ಸಾರಾಂಶ

ವಿವಿವಿಯಿಂದ ಕೊಡಮಾಡುವ ವಿಶಿಷ್ಟ ಸನ್ಮಾನ ಪಾರ್ಥಸಾರಥಿಯವರಿಗೆ ಸಂದಿದೆ. ಒಂದು ಘನತತ್ವಕ್ಕೆ ಮನಸ್ಸು ನೀಡಿದ ಅಪರೂಪದ ವ್ಯಕ್ತಿತ್ವ ಅರಳುಮಲ್ಲಿಗೆಯವರದ್ದು. ಘನತತ್ವದ ಅನುಸಂಧಾನದಲ್ಲಿ ಎಲ್ಲವನ್ನೂ ಮರೆಯಬೇಕು ಎನ್ನುವುದು ಹನುಮ ಮತನ ಉಪದೇಶ. ಹಾಗೆ ವಿಷ್ಣು ಸಹಸ್ರನಾಮದ ಅನುಸಂಧಾನದಲ್ಲಿ ತನ್ನನ್ನೇ ಮರೆತ ಅಪರೂಪದ ವ್ಯಕ್ತಿ ಎಂದು ರಾಘವೇಶ್ವರ ಶ್ರೀಗಳು ಬಣ್ಣಿಸಿದರು.

ಗೋಕರ್ಣ: ಘನತತ್ವವೊಂದರ ಅನುಸಂಧಾನದಲ್ಲಿ ತೊಡಗಿ ಇಡೀ ಜೀವನವನ್ನು ಅದಕ್ಕೆ ಮುಡಿಪಾಗಿ ಇಡುವುದು ಕೂಡಾ ಒಂದು ಬಗೆಯ ತಪಸ್ಸು. ಇದಕ್ಕೆ ಅದ್ಭುತ ಫಲವಿದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು, 52ನೇ ದಿನವಾದ ಮಂಗಳವಾರ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಗೆ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನ ಪ್ರದಾನ ಮಾಡಿ ಆಶೀರ್ವಚನ ನೀಡಿದರು.ವಿವಿವಿಯಿಂದ ಕೊಡಮಾಡುವ ವಿಶಿಷ್ಟ ಸನ್ಮಾನ ಪಾರ್ಥಸಾರಥಿಯವರಿಗೆ ಸಂದಿದೆ. ಒಂದು ಘನತತ್ವಕ್ಕೆ ಮನಸ್ಸು ನೀಡಿದ ಅಪರೂಪದ ವ್ಯಕ್ತಿತ್ವ ಅರಳುಮಲ್ಲಿಗೆಯವರದ್ದು. ಘನತತ್ವದ ಅನುಸಂಧಾನದಲ್ಲಿ ಎಲ್ಲವನ್ನೂ ಮರೆಯಬೇಕು ಎನ್ನುವುದು ಹನುಮ ಮತನ ಉಪದೇಶ. ಹಾಗೆ ವಿಷ್ಣು ಸಹಸ್ರನಾಮದ ಅನುಸಂಧಾನದಲ್ಲಿ ತನ್ನನ್ನೇ ಮರೆತ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.ಲಕ್ಷಾಂತರ ಮಂದಿ ವಿಷ್ಣು ಸಹಸ್ರನಾಮ ಪಠಣಕ್ಕೆ ಅವರು ಪ್ರೇರಣೆಯಾಗಿದ್ದಾರೆ. ದೇಶ- ವಿದೇಶಗಳಲ್ಲಿ ಇದು ಪಸರಿಸಿದೆ. ಈ ಮೂಲಕ ಭಕ್ತರನ್ನು ಭಗವಂತನ ಜತೆ ಜೋಡಿಸಿದ ಪುಣ್ಯ ಅವರದ್ದು. ಗೋವರ್ಧನಗಿರಿಧಾರಿಯ ಕ್ಷೇತ್ರವನ್ನು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸುವಲ್ಲಿ ಅವರ ಕೊಡುಗೆ ಅಪಾರ. ಇಂಥವರಿಗೆ ಪ್ರಶಸ್ತಿ ನೀಡುವ ಮೂಲಕ ಸಂಸ್ಥೆಗೆ ವಿಶೇಷ ಗೌರವ ಸಂದಿದೆ ಎಂದರು.ಕೃಷ್ಣಭಕ್ತಿಯ ಸಂಚಾರವಾಗಿ ನಮ್ಮ ಪೂರ್ವಾಚಾರ್ಯರು ಗೋವರ್ಧನಗಿರಿಧಾರಿ ಗೋಪಾಲಕೃಷ್ಣನ ಪ್ರತಿಷ್ಠಾಪನೆ ಮಾಡಿದ್ದು, ನಿರ್ಮಿಸಿದ ಅಪೂರ್ವ ದೇವಾಲಯದ ಅನಾವರಣ ಮಂಗಳವಾರ ನಡೆದಿದೆ. ಮಠದ ಎದುರಿನ ಗುಡ್ಡದ ಮೇಲೆ ಗೋವುಗಳ ಮಧ್ಯೆ ಇದನ್ನು ವೈಭವೋಪೇತವಾಗಿ ನಿರ್ಮಿಸಲಾಯಿತು ಎಂದರು.

ಪ್ರಶಸ್ತಿ ಸ್ವೀಕರಿಸಿದ ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಏಳೆಂಟು ವರ್ಷಗಳಿಂದ ಕಲ್ಲುಮುಳ್ಳುಗಳಿಂದ ಕೂಡಿದ್ದ ನೆಲದಲ್ಲಿ ಇಡೀ ಜಗತ್ತೇ ಬೆರಗಿನಿಂದ ನೋಡುವಂತೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಕಟ್ಟಿ ಬೆಳೆಸಿರುವುದು ನಾವೆಲ್ಲರೂ ಸಾಕ್ಷಿಗಳಾಗಿರುವ ಪವಾಡ. ಶಂಕರರು ಮೂರು ಬಾರಿ ಇಲ್ಲಿ ಓಡಾಡಿದ ಪರಮ ಪವಿತ್ರ ಸ್ಥಳ ಇದು. ಪ್ರಾಚೀನ ಕಾಲದಿಂದ ಇದ್ದ ಮಲ್ಲಿಕಾರ್ಜುನ ಇಲ್ಲಿಗೆ ಸಾಧು ಸಂತರು, ಸಾಧಕರನ್ನು ಅನುಗ್ರಹಿಸುತ್ತಿದ್ದ. ಇಂದು ಇಡೀ ಜಗತ್ತು ಅಚ್ಚರಿಪಡುತ್ತಿದೆ. ಜ್ಞಾನ, ಚಿಂತನೆ, ವಿದ್ಯಾ ಬುದ್ಧಿ ದಾನದ ಕೇಂದ್ರವಾಗಿ ರೂಪುಗೊಂಡಿದೆ ಎಂದರು.ವಿಷ್ಣುಸಹಸ್ರನಾಮ ಗ್ಲೋಬಲ್ ಫೌಂಡೇಷನ್‍ನ ಮುಖ್ಯಸ್ಥರಾದ ಮಂಗಳಾ ಭಾಸ್ಕರ್, ವಿವಿವಿ ಗೌರವಾಧ್ಯಕ್ಷ ಡಾ. ಡಿ.ಡಿ. ಶರ್ಮಾ, ವಿವಿವಿ ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಡಾ. ಆರ್.ಎಸ್. ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್. ಹೆಗಡೆ, ಉದ್ಯಮಿ ಜಿ.ಎಂ. ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುರ್ವಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶ್ರೀಶ ಶಾಸ್ತ್ರಿ, ಅರವಿಂದ ಬಂಗಲಗಲ್ಲು, ದೈವಜ್ಞರಾದ ಕೇಶವ ಭಟ್ ಮಿತ್ತೂರು ಮತ್ತಿತರರು ಉಪಸ್ಥಿತರಿದ್ದರು.

Share this article