ಕನ್ನಡಪ್ರಭವಾರ್ತೆ ಚಿತ್ರದುರ್ಗವಿಶ್ವ ಹಿಂದೂ ಪರಿಷತ್ ವತಿಯಿಂದ ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆ ಸೆ.28 ರ ಶನಿವಾರ ವಿಜೃಂಭಣೆಯಿಂದ ನೆರವೇರಲಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಗಣಪತಿ ಮಹೋತ್ಸವವೆಂದೆ ಖ್ಯಾತಿ ಪಡೆದಿರುವ ವಿಸರ್ಜನೆ ಶೋಭಾಯಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ನೆರೆ ರಾಜ್ಯಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಜನರು ಜಮಾವಣೆಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ಹಿಂದೆಂದೂ ಕಂಡಿರದ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಸರ್ಕಾರಿ ವಿಜ್ಞಾನ ಕಾಲೇಜು ಎದುರಿಗೆ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದಿದ್ದು, ಸುಮಾರು ಮೂರುವರೆ ಕಿ.ಮೀ ಶೋಭಾಯಾತ್ರೆ ಮೆರವಣಿಗೆ ಬಳಿಗೆ ವಿಸರ್ಜನೆ ನೆರವೇರಿಸಲಾಗುತ್ತದೆ. ಈ ದಾರಿ ಕ್ರಮಿಸಲು ಸುಮಾರು 12 ತಾಸಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದೇ ಶೋಭಾಯಾತ್ರೆ ವಿಶೇಷ.
72ವಿಡಿಯೊ ಗ್ರಾಫರ್ಸ್, 5 ಡ್ರೋನ್ ಕ್ಯಾಮರಾ ಹಾಗೂ 50 ಸ್ಕೈಸೆಂಟ್ರಿಗಳ ಮೂಲಕ ಮೆರವಣಿಗೆ ಮೇಲೆ ಹದ್ದಿನಕಣ್ಣು ಇಡಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ವಿಶೇಷ ತಂಡಗಳ ಕಣ್ಗಾವಲು ಇರುತ್ತದೆ. ಚಿತ್ರದುರ್ಗ ಪ್ರವೇಶಿಸುವ ಎಲ್ಲ ಬಸ್ಸುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಹೊಸಪೇಟೆ, ಚಳ್ಳಕೆರೆ, ಭೀಮಸಮುದ್ರ ಕಡೆಯಿಂದ ನಗರಕ್ಕೆ ಬರುವಂಥ ಎಲ್ಲ ಸಾರಿಗೆ ವಾಹನಗಳು ರಾಷ್ಟ್ರೀಯ ಹೆದ್ದಾರಿ, ಮೆದೇಹಳ್ಳಿ ರಸ್ತೆ ಮತ್ತು ಜಿಎಂಐಟಿ ಮುಖಾಂತರ ಬಂದು ಅದೇ ಮಾರ್ಗದಲ್ಲಿ ನಿರ್ಗಮಿಸಬೇಕು. ಪಾರ್ಕಿಂಗ್‌ಗೆ 10 ಸ್ಥಳಗಳನ್ನು ಗುರುತಿಸಲಾಗಿದೆ. ತುರ್ತು ಸಂದರ್ಭಕ್ಕಾಗಿ 4 ಅಂಬ್ಯುಲೆನ್ಸ್, ವೈದ್ಯರ ತಂಡ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ತಂಡ ಹಾಗೂ ವಾರ್ಡ್‌ಗಳನ್ನು ಪ್ರತ್ಯೇಕ ಕಾಯ್ದಿರಿಸಲಾಗಿದೆ.
ಆಭರಣಗಳು ತೊಡದಿರಲು ಮನವಿಶೋಭಾಯಾತ್ರೆಯಲ್ಲಿ ಕಳ್ಳರು ಕೈ ಚಳಕ ತೋರುವ ಸಾಧ್ಯತೆ ಹೆಚ್ಚು. ಗಣೇಶನ ಮೆರವಣಿಗೆ ನೋಡಲು ಆಗಮಿಸುವ ಮಹಿಳೆಯರು ಬಂಗಾರದ ಆಭರಣ, ಒಡವೆಗಳ ಧರಿಸಿ ಬರಬಾರದೆಂದು ಎಸ್ಪಿ ಬಂಡಾರು ವಿನಂತಿಸಿದ್ದಾರೆ. ಮಹಿಳೆಯರ ರಕ್ಷಣಗೆ ವಿಶೇಷ ತಂಡಗಳು ಇರುತ್ತವೆ. ಆದರೂ ವೈಯುಕ್ತಿಕ ರಕ್ಷಣೆಯಲ್ಲಿ ಇರುವುದು ಒಳಿತು ಎಂದಿದ್ದಾರೆ.
ಚಿತ್ರದುರ್ಗ ನಗರದಿಂದ ಬಿ.ಡಿ. ರಸ್ತೆಗೆ ಪ್ರವೇಶ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬ್ಯಾರಿಕೇಡ್ ನಿರ್ಮಿಸಿ ಬಂದ್ ಮಾಡಲಾಗಿದೆ. ಬ್ಯಾರಿಕೇಡ್ ಹೊರಭಾಗದಲ್ಲಿ ನಿಂತು ಶೋಭಾಯಾತ್ರೆ ವೀಕ್ಷಿಸಬಹುದಾಗಿದೆ.ಪೊಲೀಸರಿಂದ ಬಿಗಿ ಬಂದೋಬಸ್ತ್ ಶೋಭಾಯಾತ್ರೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಹಾಗೂ ಶಾಂತಿಯಿಂದ ಶೋಭಾಯಾತ್ರೆ ನಡೆಸಲು ಬೆಂಗಳೂರು ಕೇಂದ್ರ ಹಾಗೂ ದಾವಣಗೆರೆ ವಲಯಗಳಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಓರ್ವ ಎಸ್ಪಿ, ಆರು ಜನ ಎಎಸ್‌ಪಿ, 353 ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ ಒಳಗೊಂಡು 3500ಕ್ಕೂ ಹೆಚ್ಚು ಪೊಲೀಸ್ ಇಲಾಖೆಯವರು ಪಾಲ್ಗೊಳ್ಳಲಿದ್ದಾರೆ. 10 ಕೆಎಸ್‌ಆರ್‌ಪಿ, 12 ಡಿಎಆರ್ ಹಾಗೂ 4 ಕ್ಯೂಆರ್‌ಟಿ ತಂಡಗಳನ್ನು ಬಂದೋಬಸ್ತ್ ಉಸ್ತುವರಿಯಾಗಿ ನೇಮಿಸಲಾಗಿದೆ. ಶೋಭಾಯಾತ್ರೆ ವೇಳೆ ಯುವಕರು ಅಧಿಕ ಪ್ರಮಾಣದಲ್ಲಿ ಪಾಲ್ಗೊಂಡು ನೃತ್ಯ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಎರಡರಿಂದ ಮೂರು ಡಿಜೆಗಳಿಗೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.