ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಜಯದೇವ ವೃತ್ತದ ಬಳಿಯಿಂದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಜಿಲ್ಲಾಧ್ಯಕ್ಷ ಬಾಬುರಾವ್ ನೇತೃತ್ವದಲ್ಲಿ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಅನಂತರ ಲೋಕೋಪಯೋಗಿ ಇಲಾಖೆ ಕಚೇರಿಗೆ ತೆರಳಿ, ಶೀಘ್ರ ದುರಸ್ತಿಗೆ ಆಗ್ರಹಿಸಿ ಮನವಿ ಅರ್ಪಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಈ ಸಂದರ್ಭ ಮಾತನಾಡಿ, ನಗರದ ಹದಡಿ ರಸ್ತೆ ಅಭಿವೃದ್ಧಿಯನ್ನು ಲೋಕೋಪಯೋಗಿ ಇಲಾಖೆ ಸಂಪೂರ್ಣ ಮರೆತಿದೆ. ಇಲ್ಲಿನ ಶ್ರೀ ಜಯದೇವ ವೃತ್ತ, ಡಾ.ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನ ಹಾದುಹೋಗುವ ಹದಡಿ ರಸ್ತೆಯು ಅನೇಕ ತಿಂಗಳುಗಳಿಂದ ಹಾಳಾಗಿದೆ. ರಸ್ತೆ ದುರಸ್ತಿಗೆ ಮಾತ್ರ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ದೂರಿದರು.ವಿದ್ಯಾರ್ಥಿ ಭವನದಿಂದ ಸ್ವಲ್ಪ ದೂರದಲ್ಲಿ ಒಂದೇ ಕಡೆ 25-30 ಗುಂಡಿಗಳಿವೆ. ಸಣ್ಣ ಗುಂಡಿ, ದೊಡ್ಡ ಗುಂಡಿಗಳೆಲ್ಲ ಮಳೆನೀರು, ತ್ಯಾಜ್ಯ ನೀರಿನಿಂದ ತುಂಬಿರುತ್ತವೆ. ಗುಂಡಿಗಳ ಆಳ ಗೊತ್ತಿಲ್ಲದೇ ಸಾಕಷ್ಟು ವಾಹನ ಚಾಲಕರು, ಸೈಕಲ್ ಸವಾರರು ತೊಂದರೆ ಅನುಭವಿಸಿದ್ದಾರೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವಷ್ಟು ದುಸ್ಥಿತಿ ಇದೆ ಎಂದು ಕಿಡಿಕಾರಿದರು.
ಮುಖಂಡರಾದ ಅಮ್ಜದ್ ಅಲಿ, ಆಜಮ್ ರಜ್ವಿ, ಎಸ್.ಸಿದ್ದೇಶ, ಸಂತೋಷ ದೊಡ್ಮನಿ, ಮೆಹಬೂಬ್, ದಯಾನಂದ, ನಾಗರಾಜ, ಭೀಮಪ್ಪ, ಅಣ್ಣೇಶ, ಪೃಥ್ವಿ, ರಮೇಶ, ಕಿರಣ್, ಅವಿನಾಶ್, ಶಾರೂಖ್ ಹಾಷ್ಮಿ, ಜಬೀವುಲ್ಲಾ, ಬಸವರಾಜ, ರವಿಕುಮಾರ, ಆನಂದ, ಮಂಜುನಾಥ, ಯತಿರಾಜ ಇತರರು ಇದ್ದರು.