ವಿಶ್ವದರ್ಶನ ಸಂಭ್ರಮ ೨೦೨೫ ನಮ್ಮೂರ ಹಬ್ಬದ ಸಮಾರೋಪ ಸಮಾರಂಭ
ಉತ್ತರ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಯನ್ನು ಮಾಡಬೇಕು. ಆ ನೆಲೆಯಲ್ಲಿ ಹರಿಪ್ರಕಾಶ ನೇತೃತ್ವದಲ್ಲಿ ವಿಶ್ವದರ್ಶನ ಸಂಸ್ಥೆ ಶಿಕ್ಷಣ ಕ್ರಾಂತಿಗೆ ಮುಂದಾಗಿದೆ. ನಿರಂತರ ಶ್ರಮ, ಯೋಗ, ಅಧ್ಯಯನ ಇದ್ದಾಗ ಮಾತ್ರ ಯಾವುದೇ ಸಾಧನೆ ಸಾಧ್ಯವಾಗುತ್ತದೆ ಎಂದು ಪತಂಜಲಿ ಯೋಗಪೀಠದ ಕರ್ನಾಟಕ ದಕ್ಷಿಣ ಭಾರತದ ಪ್ರಭಾರಿ, ಯೋಗ ಸಾಧಕ ಭವರ್‌ಲಾಲ್ ಆರ್ಯ ಹೇಳಿದರು.
ಶನಿವಾರ ವಿಶ್ವದರ್ಶನ ಸಂಭ್ರಮ ೨೦೨೫ ನಮ್ಮೂರ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿಶ್ವದರ್ಶನ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.ರೈತ, ವೈದ್ಯ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಜೀವನದಲ್ಲಿ ಚಮತ್ಕಾರ ಬೇಕಾದರೆ ಕನಿಷ್ಠ ಒಂದು ಗಂಟೆ ನಿರಂತರ ಯೋಗ ಮಾಡಿ, ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಇಂದು ಎಲ್ಲೆಡೆ ಶಿಕ್ಷಣ ಕ್ಷೇತ್ರ ಒಂದು ವಾಣಿಜ್ಯ ಕೇಂದ್ರವಾಗಿದೆ. ಆದರೆ ವಿಶ್ವದರ್ಶನದಲ್ಲಿ ಎಲ್ಲದಕ್ಕೂ ಮಿಗಿಲಾಗಿ ಸಂಸ್ಕಾರ, ಸಂಸ್ಕೃತಿಗೆ ಭಾರತೀಯ ಮೌಲ್ಯ, ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಮಹತ್ವ ನೀಡುತ್ತಿರುವುದು ಹೆಚ್ಚು ಸಂತಸ ತರುತ್ತದೆ ಎಂದರು.
ಬೀದರ ಬಾಲ್ಕಿಯ ಉದ್ಯಮಿ ಚೆನ್ನಬಸವಣ್ಣ ಬಳತೆ, ಬೆಂಗಳೂರಿನ ರಿಪೋಸ್ ಕಂಪೆನಿಯ ಮಾಲೀಕ ರಾಮನಾಥ ಭಟ್ಟ ಅಡಿಕೆಪಾಲ, ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿದರು.
ಎರಡು ದಿನಗಳ ವಿಶ್ವದರ್ಶನ ಸಂಭ್ರಮದ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಶ್ವದರ್ಶನದ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮತ್ತು ಅಂಕೋಲಾ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ಗುರುದತ್ತ ನಾಯಕ ದಂಪತಿಗಳನ್ನು ಗೌರವಿಸಲಾಯಿತು. ಪಿಯು ಕಾಲೇಜು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.