ಕನ್ನಡಪ್ರಭ ವಾರ್ತೆ ಕನಕಪುರ
ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡುವುದು ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 11- 12ನೇ ಶತಮಾನದಲ್ಲೇ ಇಡೀ ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ, ವಿಶ್ವಗುರು ಬಸವಣ್ಣ ಎಂದು ಗ್ರೇಡ್-2 ತಹಸೀಲ್ದಾರ್ ಶಿವಕುಮಾರ್ ತಿಳಿಸಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸುಮಾರು 900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ, ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ವೀರಶೈವ ತರುಣ ಸಂಘದ ಅಧ್ಯಕ್ಷ ಕೆ. ಆರ್. ಸುರೇಶ್ ಮಾತನಾಡಿ, 12ನೇ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಬಸವಣ್ಣನವರು, ಅವರ 1400 ಕ್ಕೂ ಹೆಚ್ಚು ಸಂಖ್ಯೆಯ ವಚನಗಳಿಂದ ಹಾಗೂ ಪುರಾಣಗಳಲ್ಲಿ ಸೂಚಿತವಾಗಿರುವ ಘಟನೆಗಳಿಂದ ಚಾರಿತ್ರಿಕ ಅಂಶಗಳಿಂದ ಅವರ ಜೀವನ ಚರಿತ್ರೆಯನ್ನು ಹಾಗೂ ಸಾಧನೆಗಳನ್ನೂ ಕಾಣಬಹುದಾಗಿದೆ ಎಂದರು.ಇಹಲೋಕದ ಜೀವನವನ್ನು ಸಾಧನೆಯ ಮಾರ್ಗಕ್ಕೆ ಅಳವಳಡಿಸಿಕೊಳ್ಳುವುದೇ ಬಸವಣ್ಣನವರು ಬೋಧಿಸಿದ ಪರಮತತ್ತ್ವ. ಅದಕ್ಕೆ ಜಾತಿ, ಮತ, ಉದ್ಯೋಗ, ವಯಸ್ಸು ಯಾವುದೂ ಅಡ್ಡಿಯಿಲ್ಲ,ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ನಮ್ಮ ಕೂಡಲ ಸಂಗನ ಶರಣರೆಲ್ಲಾ ಒಂದೇ ಕುಲದವರು ಎಂಬುದು ಅವರ ನುಡಿಮಾತ್ರವಲ್ಲ ಅವರ ನಡೆಯೂ ಆಗಿತ್ತು ಎಂದರು.
ದಲಿತ ಮುಖಂಡ ನೀಲಿ ರಮೇಶ್ ಮಾತನಾಡಿ, ಬಸವಣ್ಣ ನವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆಗಳನ್ನು ಇಂದಿನ ಸಮಾಜಕ್ಕೆ ತಿಳಿಸುವ ಅವಶ್ಯಕತೆ ಹೆಚ್ಚಾಗಿದೆ ಎಂದರು.ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಇಡೀ ಮಾನವ ಕುಲಕ್ಕೆ ಸಂದೇಶ ಸಾರಿದ ಬಸವಣ್ಣನ್ನು ಕೇವಲ ಒಂದು ಧರ್ಮ, ಒಂದು ಜಾತಿಗೆ ಸೀಮಿತಗೊಳಿಸಿ ಅವರ ಮೂಲ ಉದ್ದೇಶವನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಹಾಗೂ ಸಂಘ- ಸಂಸ್ಥೆಗಳು ಎಡವುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎ. ಪಿ ಕೃಷ್ಣಪ್ಪ, ಕುಮಾರಸ್ವಾಮಿ,ಕೂ.ಗಿ.ಗಿರಿಯಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವನ ಹಳ್ಳಿ ಶಿವಲಿಂಗಯ್ಯ, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು ಹಾಗೂ ಬಿಜೆಪಿ ಮುಖಂಡ ಭರತ್, ಆನಂದ್ ಪೈ ಬಸವಣ್ಣ ನವರ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡುವ ಯಾವುದೇ ಮಹಾನ್ ನಾಯಕರುಗಳ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕಿನ ಬಹುತೇಕ ಅಧಿಕಾರಿಗಳು ಗೈರುಹಾಜರಾಗುವ ಮೂಲಕ ದಿವ್ಯ ನಿರ್ಲಕ್ಷ್ಯತೋರುತ್ತಾ ಬರುತ್ತಿದ್ದಾರೆ ಎಂದು ಸಂಘಟನೆಗಳ ಮುಖಂಡರುಗಳಾದ ಕುಮಾರಸ್ವಾಮಿ, ಮಲ್ಲಿಕಾರ್ಜುನ್, ಪೈ. ಆನಂದ್, ವೀರೇಶ್ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಉಪ ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲೂ ಪ್ರತಿಯೊಂದು ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳುವಂತೆ ನೋಟೀಸ್ ನೀಡುತ್ತೇವೆ. ಆದರೂ ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸಿದರು, ಕೆ ಕೆ ಪಿ ಸುದ್ದಿ 01: ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಿಸಲಾಯಿತು.