ಚನ್ನಗಿರಿ, ಜಗಳೂರು, ಹೊನ್ನಾಳಿ ಹಿಂದುಳಿದ ಪ್ರದೇಶ

KannadaprabhaNewsNetwork |  
Published : Apr 30, 2025, 02:08 AM IST

ಸಾರಾಂಶ

ದಾವಣಗೆರೆ ಜಿಲ್ಲೆಯು ಅಭಿವೃದ್ಧಿ ಹೊಂದಿದ ಪ್ರದೇಶವಾದರೂ, ಚನ್ನಗಿರಿ ಹಿಂದುಳಿದಿದ್ದರೆ, ಜಗಳೂರು, ಹೊನ್ನಾಳಿ ಅತಿ ಹಿಂದುಳಿದ ತಾಲೂಕು ಪ್ರದೇಶಗಳಾಗಿವೆ ಎಂದು ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗ ಅಧ್ಯಕ್ಷ, ಆರ್ಥಿಕ ತಜ್ಞ ಡಾ. ಪ್ರೊ. ಎಂ.ಗೋವಿಂದರಾವ್ ಹೇಳಿದರು.

- ಜಿಲ್ಲೆ ಅಭಿವೃದ್ಧಿ ಪ್ರದೇಶವಾದರೂ, 3 ತಾಲೂಕುಗಳು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿವೆ: ಡಾ. ಪ್ರೊ.ಗೋವಿಂದರಾವ್‌ - ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲೆಯು ಅಭಿವೃದ್ಧಿ ಹೊಂದಿದ ಪ್ರದೇಶವಾದರೂ, ಚನ್ನಗಿರಿ ಹಿಂದುಳಿದಿದ್ದರೆ, ಜಗಳೂರು, ಹೊನ್ನಾಳಿ ಅತಿ ಹಿಂದುಳಿದ ತಾಲೂಕು ಪ್ರದೇಶಗಳಾಗಿವೆ ಎಂದು ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗ ಅಧ್ಯಕ್ಷ, ಆರ್ಥಿಕ ತಜ್ಞ ಡಾ. ಪ್ರೊ. ಎಂ.ಗೋವಿಂದರಾವ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದದಲ್ಲಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆ ಅಭಿವೃದ್ಧಿ ಹೊಂದಿದ ಪ್ರದೇಶವಾಗಿ ಹೊರಹೊಮ್ಮಿದರೂ, 0.78 ಸೂಚ್ಯಂಕದೊಂದಿಗೆ ಚನ್ನಗಿರಿ ಅತ್ಯಂತ ಹಿಂದುಳಿದ ತಾಲೂಕಾಗಿದೆ ಎಂದರು.

ಜಗಳೂರು, ಹೊನ್ನಾಳಿ ಅನುಕ್ರಮವಾಗಿ 0.80 ಮತ್ತು 0.86 ಸೂಚ್ಯಂಕದೊಂದಿಗೆ ಅತಿ ಹಿಂದುಳಿದ ತಾಲೂಕು ಪ್ರದೇಶಗಳಾಗಿವೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ದಾವಣಗೆರೆ ಜಿಲ್ಲೆಗೆ ಶಿಫಾರಸಿನ ಅನ್ವಯ ಸರ್ಕಾರವು 2007-08ರಿಂದ 2023-24 ರವರೆಗೆ ₹821 ಕೋಟಿ ಹಂಚಿಕೆ ಮಾಡಿದೆ. ಇದರಲ್ಲಿ ₹698 ಕೋಟಿಗಳು ಅಭಿವೃದ್ಧಿಗೆ ಬಿಡುಗಡೆಯಾಗಿದ್ದು, ₹640 ಕೋಟಿ ಖರ್ಚಾಗಿದೆ ಎಂದು ಹೇಳಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಜ್ಯದ 175 ತಾಲೂಕುಗಳನ್ನು ಅಧ್ಯಯನ ಮಾಡಿ, ಡಾ. ಡಿ.ಎಂ. ನಂಜುಂಡಪ್ಪ ಅವರು 39 ಅತ್ಯಂತ ಹಿಂದುಳಿದ ತಾಲೂಕುಗಳು, 40 ಅತಿ ಹಿಂದುಳಿದ ತಾಲೂಕುಗಳು, 35 ಅತ್ಯಂತ ಹಿಂದುಳಿದ ತಾಲೂಕುಗಳೆಂಬುದಾಗಿ ಹಿಂದುಳಿದಿರುವಿಕೆ ಗುರುತಿಸಿದ್ದರು. ಉತ್ತರ ಕರ್ನಾಟಕ ಭಾಗವು 26 ಅತ್ಯಂತ ಹಿಂದುಳಿದ ತಾಲೂಕುಗಳನ್ನು ಹೊಂದಿದ್ದರೆ, ದಕ್ಷಿಣ ಕರ್ನಾಟಕದ 13 ತಾಲೂಕುಗಳಿವೆ ಎಂದು ಅವರು ವಿವರಿಸಿದರು.

ಮಾರ್ಚ್‌ 2024ಕ್ಕೆ ಆಯೋಗ ರಚನೆಯಾಗಿದ್ದರೂ, ಸೆಪ್ಟಂಬರ್ 2024ರಿಂದ ಪೂರ್ಣ ಪ್ರಮಾದಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯ ನಿರ್ವಹಿಸಲು ಆರಂಭಿಸಿತು. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ ಜಿಲ್ಲೆಗಳು ಮಾತ್ರವೇ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯ ವೇಗ ಹೊಂದಿವೆ. ಉಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ವೇಗ ಪಡೆದಿಲ್ಲ. ಮೂಲಸೌಕರ್ಯ, ವಿದ್ಯುತ್, ರಸ್ತೆ, ಹಣಕಾರು, ಶಿಕ್ಷಕರು, ವಿದ್ಯಾರ್ಥಿ ಅನುಪಾತ, ಸಾಕ್ಷರತೆ, ವೈದ್ಯಕೀಯ ವ್ಯವಸ್ಥೆ, ಕೈಗಾರಿಕೆ, ನೀರಾವರಿ, ಕೃಷಿ, ಸೇವಾ ವಲಯ ಸೇರಿದಂತೆ 32 ಸೂಚ್ಯಂಕಗಳನ್ನು ಆಧರಿಸಿ, ಆಯೋಗ ವರದಿ ಸಂಗ್ರಹಿಸಲಿದೆ ಎಂದು ತಿಳಿಸಿದರು.

ಆಯೋಗವು ಪ್ರತಿ ಜಿಲ್ಲೆಗೂ ಭೇಟಿ ನೀಡಿ, ಅಲ್ಲಿನ ಜನರ ಅನುಭವ, ಅಭಿಪ್ರಾಯ ಪಡೆದು, ಸಂಗ್ರಹಿಸಿದ ಮಾಹಿತಿ, ಅಧ್ಯಯನದ ವರದಿ ಆದಾರದಲ್ಲಿ ಅಸಮಲೋಕನ ನಿವಾರಣೆ ಹಾಗೂ ಸಮಗ್ರ ಕರ್ನಾಟಕದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು, ಶಿಫಾರಸುಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಡಾ.ಪ್ರೊ. ಎಂ.ಗೋವಿಂದ ರಾವ್ ಹೇಳಿದರು.

ಮಾಯಕೊಂಡ ಶಾಸಕ ಕೆ.ಎಸ್..ಬಸವಂತಪ್ಪ ಮಾತನಾಡಿ, ಕೃಷಿ, ಕೈಗಾರಿಕೋದ್ಯಮದಲ್ಲಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಆದರೆ, ಪ್ರಸ್ತುತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ, ಕೆಲವು ಕೈಗಾರಿಕೆಗಳು ನಶಿಸುತ್ತಿವೆ. ಕೃಷಿ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ರೈತರು ಆರ್ಥಿಕವಾಗಿ ಸಬಲವಾಗಲು ವಿದ್ಯುತ್, ನೀರನ್ನು ಸಮರ್ಪಕವಾಗಿ ಒದಗಿಸಬೇಕು. ಕೆರೆಗಳಿಗೆ ನೀರು ತುಂಬಿಸಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ಒದಗಿಸಿ, ಕೃಷಿಗೆ ಒತ್ತು ನೀಡಬೇಕು. ಕೃಷಿ ಸಂಬಂಧಿ ಕೈಗಾರಿಕೆ, ಕಾರ್ಖಾನೆಗಳಿಗೆ ಮೊದಲ ಆದ್ಯತೆ ನೀಡಿ, ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದರು.

ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್‌, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಆಯೋಗದ ಸದಸ್ಯ ಕಾರ್ಯದರ್ಶಿ ಡಾ.ವಿಶಾಲ್‌, ಡಾ. ಎಸ್.ಬಾಗಲಕೋಟ್‌, ಅಪರ ಡಿಸಿ ಪಿ.ಎನ್. ಲೋಕೇಶ, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲ ನಾಯಕ್‌, ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಪ್ರಭಾರ ಡಿಡಿಪಿಐ ರಾಜಶೇಖರ, ಕೃಷಿ ಮತ್ತು ಕೈಗಾರಿಕಾ ಉಪ ನಿರ್ದೇಶಕ ಶಿವಲಿಂಗಪ್ಪ ಕುಂಬಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

- - -

(ಬಾಕ್ಸ್‌) * ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಚನ್ನಗಿರಿ ಅತ್ಯಂತ ಹಿಂದುಳಿದ ತಾಲೂಕಾಗಿದೆ. ಶೈಕ್ಷಣಿಕವಾಗಿ ತುಂಬಾ ಹಿಂದಿದೆ. ಶಿಕ್ಷಕ, ಬೋಧಕರ ಕೊರತೆ ಇದಕ್ಕೆ ಕಾರಣ. ಹೀಗಾದರೆ ಉತ್ತಮ ಫಲಿತಾಂಶ ನಿರೀಕ್ಷೆ ಹೇಗೆ ಸಾಧ್ಯ? ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ, ಉಳಿದೆಲ್ಲವೂ ತಾನಾಗೇ ಬರುತ್ತದೆ. ಚನ್ನಗಿರಿ, ಜಗಳೂರು ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶ ಇವೆ. ಪ್ರವಾಸೋದ್ಯಮ ಅಭಿವೃದ್ಧಿ, ಜಿಲ್ಲೆಯಲ್ಲಿ ಸಂಶೋಧನಾ ಕೇಂದ್ರ, ಏರ್‌ಪೋರ್ಟ್‌ ಸ್ಥಾಪಿಸಿದರೆ ಜಿಲ್ಲೆ ಅಭಿವೃದ್ಧಿ ಜೊತೆಗೆ ಉದ್ಯೋಗಾವಕಾಶಗಳ ಸೃಷ್ಟಿಯೂ ಸಾಧ್ಯ ಎಂದು ಹೇಳಿದರು.

- - -

(ಕೋಟ್‌-1) ರಾಜ್ಯದಲ್ಲಿ ಪ್ರಸ್ತುತ 240 ತಾಲೂಕು ಇದ್ದು, ಇಷ್ಟೊಂದು ಹಣವನ್ನು ಖರ್ಚು ಮಾಡಿದ ಬಳಿಕವೂ ತಾಲೂಕುಗಳ ಹಿಂದುಳಿದಿರುವಿಕೆ ಕಡಿಮೆಯಾಗಿದೆಯೇ, ಯಾವೆಲ್ಲಾ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಯಾಗಿದೆ, ಹಣ ನೀಡಿದರೂ ಅಭಿವೃದ್ಧಿಯಾಗಿಲ್ಲ ಎಂದರೆ ಅದಕ್ಕೆ ಕಾರಣ ಏನೆಂಬುದನ್ನು ಕೂಲಂಕುಷವಾಗಿ ಪರಿಶೀಲಿಸಿ, ರಾಜ್ಯದ ಅಸಮತೋಲನ ಸರಿಪಡಿಸಿ, ಸಮಗ್ರ ಕರ್ನಾ ಕದ ಅಭಿವೃದ್ಧಿಗೆ ಏನೆಲ್ಲಾ ಕ್ರಮ ವಹಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗ ರಚಿಸಿದೆ.

- ಡಾ. ಪ್ರೊ.ಎಂ.ಗೋವಿಂದರಾವ್, ಆರ್ಥಿಕ ತಜ್ಞ

- - -

(ಕೋಟ್‌-2)ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಶಿಕ್ಷಣದ ಕುರಿತು ತರಬೇತಿ ಅವಶ್ಯಕತೆ ಇದೆ. 6 ವರ್ಷ ತುಂಬುವವರೆಗೂ ಮಕ್ಕಳು 1ನೇ ತರಗತಿಗೆ ಪ್ರವೇಶ ಇರುವುದಿಲ್ಲ. ಆದ್ದರಿಂದ ಹೆಚ್ಚಿನ ಕಾಲ ಅಂಗನವಾಡಿಯಲ್ಲೇ ಮಕ್ಕಳು ಮೂಲ ಅಕ್ಷರ ಕಲಿಯಬೇಕಾಗುತ್ತದೆ. 9ನೇ ತರಗತಿ ಮಕ್ಕಳಿಗೆ ಲ್ಯಾಬ್ ಪರಿಕರ ಬೇಕಾಗಿದ್ದು, ಸರ್ಕಾರಿ ಶಾಲೆಗಳಿಗೆ ಗಣಿತ, ವಿಜ್ಞಾನ ಶಿಕ್ಷಕರ ಅವಶ್ಯಕತೆ ಇದೆ. ಜಗಳೂರು ತಾಲೂಕು ಆಸ್ಪತ್ರೆಗಳನ್ನು 24*7 ಆಗಿ ಅಭಿವೃದ್ಧಿಪಡಿಸಬೇಕು. ಆ ತಾಲೂಕಿಗೆ ಆಶಾ ಕಾರ್ಯಕರ್ತೆಯರನ್ನು ಹೆಚ್ಚಾಗಿ ನೀಡಬೇಕು. ಇದರಿಂದ ಗರ್ಭಿಣಿ ಮಹಿಳೆಯರ ಸಾವಿನ ಪ್ರಮಾಣ ಕಡಿಮೆ ಮಾಡಬಹುದು.

- ಸುರೇಶ ಬಿ. ಇಟ್ನಾಳ್, ಪ್ರಭಾರ ಡಿಸಿ, ಜಿಪಂ ಸಿಇಒ

- - - -29ಕೆಡಿವಿಜಿ:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗ ಅಧ್ಯಕ್ಷ, ಆರ್ಥಿಕ ತಜ್ಞ ಡಾ.ಪ್ರೊ.ಎಂ.ಗೋವಿಂದರಾವ್ ಮಾತನಾಡಿದರು.

- - -

-29ಕೆಡಿವಿಜಿ3:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಸಂವಾದ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣಾ ಆಯೋಗ ಅಧ್ಯಕ್ಷ, ಆರ್ಥಿಕ ತಜ್ಞ ಡಾ. ಪ್ರೊ.ಎಂ.ಗೋವಿಂದರಾವ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ