ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಹಯೋಗದಲ್ಲಿ ಅಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಜಯಂತಿ ಒಂದು ಪವಿತ್ರವಾದ ದಿನ. ಬ್ರಹ್ಮನ ಮಗನಾದ ವಿಶ್ವಕರ್ಮನು ಶಿಲ್ಪಕಲೆ, ವಾಸ್ತುಶಿಲ್ಪ ಕರಕುಶಲತೆ ಯನ್ನು ಜಗತ್ತಿಗೆ ನೀಡಿದವರು. ಎಷ್ಟೇ ತಾಂತ್ರಿಕತೆ ಬೆಳೆದರೂ ಕಲೆ, ಸಾಹಿತ್ಯ, ಕೌಶಲ್ಯಗಳನ್ನು ಮಷೀನ್‌ಗಳು ಸೃಷ್ಟಿಸಲು ಸಾಧ್ಯವಿಲ್ಲ ಎಂದರು.ಪ್ರಧಾನಮಂತ್ರಿಯವರು ಕುಶಲಕರ್ಮಿಗಳ ರಕ್ಷಣೆಗಾಗಿ ಹಾಗೂ ಯುವಜನತೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆಂಬ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದು 8 ರಿಂದ 10 ಕೋಟಿ ಯುವ ಕುಶಲಕರ್ಮಿಗಳ ವೃತ್ತಿ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರೀ ಕಲಾ ವಿಜ್ಞಾನ ಮತ್ತು ಎಸ್.ಬಿ.ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನ ಇತಿಹಾಸ ಉಪನ್ಯಾಸಕ ನವೀನ್ ಜಿ. ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರನ್ನು ನಾವು ಅನಂತ, ಅನಾದಿ ಎಂದು ಬಣ್ಣಿ ಸುತ್ತೇವೆ. 33 ಕೋಟಿ ದೇವರನ್ನು ಸೃಷ್ಟಿ ಮಾಡಿದವರು ವಿಶ್ವಕರ್ಮ. ದೊಡ್ಡ ದೊಡ್ಡ ಅರಮನೆಗಳು ಹಾಗೂ ಸೇತುವೆ ನಿರ್ಮಾಣಕಾರ ವಿಶ್ವಕರ್ಮ. ಖಗೋಳಶಾಸ್ತ್ರದ ಜ್ಞಾನವನ್ನೂ ಹೊಂದಿದ್ದ ವಿಶ್ವಕರ್ಮರ ಪಾಂಡಿತ್ಯ ಅಪಾರ. ಕುಶಲಕರ್ಮಿ ಗಳಾಗಿ ಬಹುಮುಖಿ ಸಾಧನೆಯನ್ನು ವಿಶ್ವಕರ್ಮರು ಮಾಡಿದ್ದಾರೆ ಎಂದು ತಿಳಿಸಿದ ಅವರು ಶ್ರೀ ವಿಶ್ವಕರ್ಮರ ಸೃಷ್ಟಿ ಮತ್ತು ಚರಿತ್ರೆ ಕುರಿತು ಮಾತನಾಡಿದರು.
ವಿಶ್ವಕರ್ಮ ಸಮಾಜದ ಮುಖಂಡರಾದ ಎಸ್.ರಾಮು ಮಾತನಾಡಿ, ಮೊದಲು ವಿಶ್ವಕರ್ಮ ಸಮುದಾಯದವರನ್ನು ಒಗ್ಗೂಡಿಸಲು ಪೂಜಾ ಕಾರ್ಯ ಮಾಡುತ್ತಿದ್ದೆವು. ಇದೀಗ ಸರ್ಕಾರ ವಿಶ್ವಕರ್ಮ ಜಯಂತಿಯ ಆಚರಣೆ ಜಾರಿಗೆ ತಂದಿದೆ. ಹಾಗೂ ನಮ್ಮ ಪ್ರಧಾನಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದು ಕುಶಲಕರ್ಮಿಗಳಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ವಿಶ್ವಕರ್ಮ ಸಮಾಜದಲ್ಲಿ 42 ಉಪ ಪಂಗಡಗಳಿದ್ದು, ಎಲ್ಲರೂ ಒಗ್ಗೂಡಬೇಕೆಂದು ಹೇಳಿದರು.
ಜಿಲ್ಲಾ ವಿಶ್ವ ಬ್ರಾಹ್ಮಣರ ಸಂಘದ ಅಧ್ಯಕ್ಷ ಸೋಮಾಚಾರಿ, ಸಮಾಜದ ಮುಖಂಡರಾದ ಅಗರದಹಳ್ಳಿ ನಿರಂಜನಮೂರ್ತಿ, ಶ್ರೀನಿವಾಸ್, ಎಚ್.ಎಂ.ಲೀಲಾ ಮೂರ್ತಿ, ರೂಪಾ ಚಂದ್ರಶೇಖರ್, ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ ಸ್ವಾಗತಿಸಿದರು.