ಹೊಳಲ್ಕೆರೆಯಲ್ಲಿ ಚಿನ್ನಸ್ವಾಮಿಯಂತೆ ಕ್ರೀಡಾಂಗಣ ನಿರ್ಮಾಣ

KannadaprabhaNewsNetwork | Published : Sep 18, 2024 1:56 AM

ಸಾರಾಂಶ

ಹೊಳಲ್ಕೆರೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಾದರಿಯಲ್ಲಿ ಸುಮಾರು ₹15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಚಂದ್ರಪ್ಪ ಹೇಳಿದರು.

ಕನ್ನಡಪ್ರಭವಾರ್ತೆ ಹೊಳಲ್ಕೆರೆ ಹೊಳಲ್ಕೆರೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಾದರಿಯಲ್ಲಿ ಸುಮಾರು ₹15 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಶಾಸಕ ಚಂದ್ರಪ್ಪ ಹೇಳಿದರು.ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂ.ಜಿ. ಬೋರನಾಯಕ ಪ್ರೌಢಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಹೊಣೆಗಾರಿಕೆ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರುಗಳ ಮೇಲಿದೆ. ಬೋರಯ್ಯ ನಾಯಕರು ಯಾವುದೇ ಫಲಾಪೇಕ್ಷೆಯಿಲ್ಲದೇ ಮಕ್ಕಳ ಶಿಕ್ಷಣಕ್ಕಾಗಿ ಭೂಮಿಯನ್ನು ದಾನ ಮಾಡಿ ಸಾರ್ಥಕ ಕೆಲಸ ಮಾಡಿದ್ದಾರೆಂದು ಸ್ಮರಿಸಿಕೊಂಡರು. ಶಾಸಕರ ನಿಧಿಯಿಂದ ಒಳಾಂಗಣ ಕ್ರೀಡಾಂಗಣಕ್ಕೆ ₹5 ಕೋಟಿ ನೀಡಿದ್ದೇನೆ ಎಂದು ತಿಳಿಸಿದರು.

ಮಕ್ಕಳು ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿ ಎನ್ನುವ ಕಾರಣಕ್ಕಾಗಿ ಈಜುಕೊಳಕ್ಕೆ ₹2 ಕೋಟಿ ವೆಚ್ಚ ಮಾಡಲಾಗಿದೆ. ನಮ್ಮ ತಾಲೂಕಿನ ಮಕ್ಕಳು ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ತಯಾರು ಮಾಡಬೇಕೆಂದು ದೈಹಿಕ ಶಿಕ್ಷಕರಿಗೆ ಮನವಿ ಮಾಡಿದರು.

ರೈಲ್ವೆ ಸ್ಟೇಷನ್ ರಸ್ತೆಗೆ ನಾಲ್ಕುವರೆ ಕೋಟಿ ರೂ.ಗಳನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ಪೂರೈಸುವುದಕ್ಕಾಗಿ ₹480 ಕೋಟಿ ಖರ್ಚು ಮಾಡಿ ಪೈಪ್‍ಲೈನ್ ಹಾಕಿಸಿದ್ದೇನೆ. ಗುಣ ಮಟ್ಟದ ರಸ್ತೆ, ಶಾಲಾ-ಕಾಲೇಜುಗಳು ಕಟ್ಟಿಸಿದ್ದೇನೆ. ಅಧಿಕಾರ ಸಿಕ್ಕಾಗ ಹತ್ತಾರು ಜನಕ್ಕೆ ಒಳ್ಳೆಯದು ಮಾಡಬೇಕೆನ್ನುವುದು ನನ್ನ ಉದ್ದೇಶ ಎಂದು ಹೇಳಿದರು.

ಮಕ್ಕಳು ಆರೋಗ್ಯವಂತರಾಗಿರಬೇಕಾದರೆ ಪಾಠದ ಜತೆ ಕ್ರೀಡೆಗೂ ಹೆಚ್ಚಿನ ಮಹತ್ವ ಕೊಡಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲು ಆಗುವುದಿಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತವರು ಸೋಲನ್ನೆ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುಂದೆ ಗೆಲ್ಲಬೇಕು ಎಂದು ಹುರುಪು ತುಂಬಿದರು.

ಮಾಜಿ ಶಾಸಕ ಹೆಚ್.ಪಿ .ರಾಜೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಟಿ. ಪಾಲೇಗೌಡ್ರು, ಸದಸ್ಯರಾದ ಓಬಣ್ಣ, ಶ್ರೀಮತಿ ಶೃತಿ ಕೆ.ಎಸ್. ಶ್ರೀಮತಿ ಜಯಲಕ್ಷ್ಮಿ, ಶಿವಣ್ಣ ಆರ್. ಸುರೇಶ್, ಶ್ರೀಮತಿ ರೂಪ ಜಿ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್ ಎಸ್. ವಿಜಯಕುಮಾರ್, ಪ್ರಶಾಂತ್ ಕುಮಾರ್, ಮೋಹನ್‍ಕುಮಾರ್, ಚಿದಾನಂದಸ್ವಾಮಿ ಹಾಗೂ ಶಿಕ್ಷಕರುಗಳು ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

Share this article