ವಿಶ್ವಕರ್ಮ ಸಮುದಾಯ ಸಂಘಟಿತರಾಗಿ ಸ್ಥಾನಮಾನ ಪಡೆಯಬೇಕು: ಎನ್.ಬಸವರಾಜು

KannadaprabhaNewsNetwork | Published : Sep 18, 2024 1:55 AM

ಸಾರಾಂಶ

ರಾಜ್ಯದ ಬಹುಸಂಖ್ಯಾ ಸಮುದಾಯಗಳಲ್ಲಿ 45 ಲಕ್ಷ ಜನರಿರುವ ವಿಶ್ವಕರ್ಮ ಸಮುದಾಯವು ಸಹ ಒಂದಾಗಿದೆ. ಆದರೂ, ಸಹ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳು ಸರಿಯಾಗಿ ದೊರೆತ್ತಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಶ್ವಕರ್ಮ ಸಮುದಾಯ ಸಂಘಟಿತರಾಗುವ ಮೂಲಕ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಾನಮಾನಗಳನ್ನು ಪಡೆದುಕೊಳ್ಳಬೇಕು ಎಂದು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಿತಿ ತಾಲೂಕು ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಎನ್.ಬಸವರಾಜು ಹೇಳಿದರು.

ಪಟ್ಟಣದ ಶಾಂತಿನಗರದ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಿತಿ ಕಚೇರಿ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿ, ರಾಜ್ಯದ ಬಹುಸಂಖ್ಯಾ ಸಮುದಾಯಗಳಲ್ಲಿ 45 ಲಕ್ಷ ಜನರಿರುವ ವಿಶ್ವಕರ್ಮ ಸಮುದಾಯವು ಸಹ ಒಂದಾಗಿದೆ. ಆದರೂ, ಸಹ ನಮ್ಮ ಸಮುದಾಯಕ್ಕೆ ರಾಜಕೀಯ ಸ್ಥಾನಮಾನಗಳು ಸರಿಯಾಗಿ ದೊರೆತ್ತಿಲ್ಲ ಎಂದರು.

ಸರ್ಕಾರಗಳು ಸಮುದಾಯವನ್ನು ನಿರ್ಲಕ್ಷ್ಯಮಾಡುತ್ತಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ಸಮಾಜದ ಯಾವುದೇ ಅಭಿವೃದ್ಧಿ ಕೆಲಸಗಳಿಗೂ ವಿಶ್ವಕರ್ಮ ಸಮುದಾಯಗಳ ಸಹಕಾರ ಬೇಕಾಗಿದೆ. ಆದ್ದರಿಂದ ಸಮುದಾಯದ ಜನರು ಸಂಘಟಿತರಾಗಬೇಕು, ಶಿಕ್ಷಣ ಕಲಿತು ಸಂವಿಧಾನದಲ್ಲಿ ಕೊಟ್ಟಿರುವ ನಮ್ಮ ಹಕ್ಕುಗಳನ್ನು ಪ್ರದರ್ಶಿಸಿ, ಸರಕಾರ ಸವಲತ್ತು ಪಡೆದುಕೊಳ್ಳಬೇಕು ಎಂದರು.

ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಕಾಯಕ ಮಾಡುವಂತಹ ಎಲ್ಲರು ಸಹ ವಿಶ್ವಕರ್ಮರೇ. ಸಮಾಜದ ಹೆಸರಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ ನಿರ್ಲಕ್ಷ್ಯ ಮಾಡುವ ಕೆಲಸ ಮಾಡಬೇಡಿ. ಎಲ್ಲರು ಒಗ್ಗಟ್ಟಿನಿಂದ ಸಮುದಾಯ ಅಭಿವೃದ್ಧಿಗೆ ಕೆಲಸ ಮಾಡಿ, ನಾನು ತಾಲೂಕಿನಲ್ಲಿ ಕೆಲಸ ಮಾಡುವ ದಿನಗಳಲ್ಲಿ ನ್ಯಾಯಯುತ, ಕಾನೂನುಬದ್ಧವಾಗಿ ಸಮುದಾಯದ ಯಾವುದೇ ಕೆಲಸ ತಂದರು ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಮಾತನಾಡಿ, ತಾಲೂಕಿನಲ್ಲಿ ವಿಶ್ವಕರ್ಮ ಸಮುದಾಯದವರು 12 ಸಾವಿರಕ್ಕೂ ಅಧಿಕ ಮಂದಿ ಇದ್ದರೂ ಸಹ ಕಾರ್‍ಯಕ್ರಮಕ್ಕೆ ಬೆರಳೆಣಿಕೆ ಮಂದಿ ಮಾತ್ರ ಬಂದಿದ್ದಾರೆ. ವಿಶ್ವಕರ್ಮ ಸಮುದಾಯದ ಜನರು ಸಂಘಟಿತರಾಗಬೇಕು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಮುಂಚೂಣಿ ನಾಯಕರಿಗೆ ಬೆಂಬಲವಾಗಿ ನಿಲ್ಲುವ ಕೆಲಸ ಮಾಡಬೇಕು ಎಂದರು.

ಈ ವೇ‍ಳೆ ಪುರಸಭೆ ಉಪಾಧ್ಯಕ್ಷ ಎಲ್.ಅಶೋಕ್, ಸದಸ್ಯ ಯಶ್ವಂತ್, ಮುಖ್ಯಾಧಿಕಾರಿ ಸತೀಶ್‌ಕುಮಾರ್, ಎಂಜಿನಿಯರ್ ಚೌಡಪ್ಪ, ಸಬ್ ಇನ್ಸ್‌ಪಕ್ಟರ್ ಧನ್‌ಪಾಲ್, ಮುಖಂಡರಾದ ಮುಳ್ಳೂರು ಸತೀಶ್, ಭಾಸ್ಕರ್‌ಚಾರ್, ಕನ್ನಡಸೋಮು, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶಿವಕುಮಾರ್, ಕಾರ್‍ಯದರ್ಶಿ ಕೆ.ಶ್ರೀನಿವಾಸಚಾರ್, ಖಜಾಂಚಿ ಭಾಸ್ಕರ್‌ಚಾರ್, ಗ್ರಾಪಂ ಸದಸ್ಯ ಬಿ.ಶ್ರೀನಿವಾಸ್, ನಿರ್ದೇಶಕರಾದ ಸಂಪತ್‌ಚಾರ್, ಆನಂದಚಾರ್, ಮೋಹನ್‌ಚಾರ್, ಡಿ.ಎನಾಗರಾಜು, ಚಂದ್ರಚಾರ್, ಡಿ.ಕೆ.ಕೃಷ್ಣಾಚಾರ್, ಯೋಗರಾಜ್, ಸ್ವಾಮಚಾರ್, ಸುರೇಶ್‌ಚಾರ್ ಸೇರಿದಂತೆ ಹಲವರು ಇದ್ದರು.

Share this article