ವಿಘ್ನ ನಿವಾರಕನಿಗೆ ಸಂಭ್ರಮದ ವಿದಾಯ

KannadaprabhaNewsNetwork | Published : Sep 18, 2024 1:55 AM

ಸಾರಾಂಶ

ರಾತ್ರಿ ಒಂದೇ ಜಪ, ಅದುವೇ ಗಣಪತಿ ಬಪ್ಪಾ ಮೋರಯಾ... ಮಂಗಲ ಮೂರ್ತಿ ಮೋರಯಾ... ಮೋರಿಯಾರೆ.. ಬಪ್ಪ.. ಮೋರಿಯಾರೆ... ಗಣೇಶ ಮಹರಾಜಕೀ ಜೈ... ಜಯಘೋಷಗಳು ಮುಗಿಲು ಮುಟ್ಟಿದ್ದವು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾತ್ರಿ ಒಂದೇ ಜಪ, ಅದುವೇ ಗಣಪತಿ ಬಪ್ಪಾ ಮೋರಯಾ... ಮಂಗಲ ಮೂರ್ತಿ ಮೋರಯಾ... ಮೋರಿಯಾರೆ.. ಬಪ್ಪ.. ಮೋರಿಯಾರೆ... ಗಣೇಶ ಮಹರಾಜಕೀ ಜೈ... ಜಯಘೋಷಗಳು ಮುಗಿಲು ಮುಟ್ಟಿದ್ದವು.

ಭಾದ್ರಪದ ಚೌತಿಯಂದು ಪ್ರತಿಷ್ಠಾಪನೆಗೊಂಡ ಸಾರ್ವಜನಿಕ ಗಣೇಶ ವಿಗ್ರಹಗಳು 11ನೇ ದಿನವಾದ ಮಂಗಳವಾರ ಅನಂತ ಚತುರ್ದಶಿಯಂದು ಭವ್ಯ ಮೆರವಣಿಗೆಯೊಂದಿಗೆ ವಿಸರ್ಜನೆಗೊಂಡಿತು. ಗಣೇಶ ವಿಸರ್ಜನೆಯ ನಿಮಿತ್ತ ಸಂಪೂರ್ಣ ನಗರದಲ್ಲಿ ವಿಘ್ನನಿವಾರಕನ ಗಾಯನ, ನೃತ್ಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಕಿರ್ಲೋಸ್ಕರ್‌ ವೃತ್ತದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಶಾಸಕರಾದ ಅಭಯ ಪಾಟೀಲ, ಆಸೀಫ್‌ ಸೇಠ್‌, ಮೇಯರ್‌ ಸವಿತಾ ಕಾಂಬಳೆ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಅಭಯ ಪಾಟೀಲ ಅವರು ಗಣೇಶ ಮೂರ್ತಿ ಹೊತ್ತ ಟ್ರ್ಯಾಕ್ಟರ್‌ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಗಣೇಶೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯುತ್ತದೆ. ಸುಮಾರು 370 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.ಗಣೇಶ ವಿಸರ್ಜನೆಯ ಅದ್ಧೂರಿ ಮೆರವಣಿಗೆ ನೋಡಲು ಕಣ್ಣೆರಡೂ ಸಾಲದು ಎಂಬಂತಿತ್ತು. ಸಾಗರೋಪಾದಿಯಲ್ಲಿ ನೆರೆದಿದ್ದ ಜನರ ನಡುವೆ ಸಾಗಿದ್ದ ಗಣೇಶನ ಮೆರವಣಿಗೆ ಅದ್ಧೂರಿಯೋ ಅದ್ಧೂರಿ. ಮುಗಿಲೆತ್ತರಕ್ಕಿದ್ದ ಗಣೇಶ ವಿಗ್ರಹ ನೋಡುವುದೇ ಹಬ್ಬವಾಗಿತ್ತು. ಹುತಾತ್ಮ ಚೌಕ್‌ದಲ್ಲಿ ಪ್ರಾರಂಭಗೊಂಡ ಗಣೇಶ ಮೂರ್ತಿಗಳ ಮೆರವಣಿಗೆಯು ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೆಖೂಟ, ಧರ್ಮವೀರ ಸಂಭಾಜಿ ಚೌಕ (ಬೋಗಾರವೇಸ್), ರಾಮಲಿಂಗಖಿಂಡ ಗಲ್ಲಿ ರಸ್ತೆ, ಟಿಳಕಚೌಕ, ಹೇಮುಕಲಾನಿ ಚೌಕ (ಶಿವಭವನ), ಶನಿ ಮಂದಿರ, ಕಪಿಲೇಶ್ವರ ಫ್ಲೈ ಓವರ ರಸ್ತೆ, ರೇಣುಕಾ ಹೋಟೆಲ್ ಕ್ರಾಸ್ ಮೂಲಕ ಕಪಿಲೇಶ್ವರ ಮಂದಿರ ಬಳಿ ತೆರಳಿತು. ಕಪಿಲೇಶ್ವರ ಮಂದಿರದ ಹೊಂಡದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.ಕುಣಿದು ಕುಪ್ಪಳಿಸಿದರು:

ಗಣೇಶ ವಿಸರ್ಜನೆಗೆ ವಿವಿಧ ಜಾನಪದ ಕಲಾ ತಂಡಗಳು, ವಾದ್ಯ ವೃಂದಗಳು, ಝಾಂಜ್ ಮೇಳ, ಜಾನಪದ ಕಲಾ ತಂಡಗಳು ಮೆರಗು ತಂದಿದ್ದವು. ಕಿವಿಗಡಚಿಕ್ಕುವ ಧ್ವನಿ ವರ್ಧಗಳಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ತಕ್ಕಂತೆ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶ ನಾಮ ಸ್ಮರಣೆ, ಗಣೇಶನ ಜಯ ಘೋಷ ಹಾಕುತ್ತಾ ಕುಳಿದು ಕುಪ್ಪಳಿಸಿದರು. ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಳಿದು ಕುಪ್ಪಳಿಸುವ ಜನ ಒಂದೆಡೆಯಾದರೆ ಗಣೇಶ ವಿಸರ್ಜನೆಯ ಅವಿಸ್ಮರಣೀಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ನೆರೆದಿದ್ದರು. ಮಾರ್ಗವಾಗಿ ಸಾಗಿ ಬರುತ್ತಿದ್ದ ಗಣೇಶ ಮೆರವಣಿಗೆ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಮನೆ, ಅಂಗಡಿ ಸೇರಿದಂತೆ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಜನರು ಗಣೇಶ ವಿಸರ್ಜನೆಯ ವೈಭವವನ್ನು ವೀಕ್ಷಿಸಿದರು. ಬೆಳಗಿನ ಜಾವದವರೆಗೂ ಗಣೇಶ ವಿಸರ್ಜನೆ ಸಂಭ್ರಮದಿಂದ ನೆರವೇರಿತು. ಬಾನಂಗಳದಲ್ಲಿ ಚಿತ್ತಾರ:

ಗಣೇಶ ಹಬ್ಬ ಎಂದ ಮೇಲೆ ಕೇಳಬೇಕೇ ಪಟಾಕಿ ಸದ್ದು ಇದ್ದೇ ಇರುತ್ತದೆ. ಪರಿಸರ ಹಾನಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸದ್ದು ಮಾತ್ರ ಅಡಗಲಿಲ್ಲ. ಬಾನಂಗಳದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳು ಆಕರ್ಷಕವಾಗಿದ್ದವು. ಮಕ್ಕಳು, ಮಹಿಳೆಯರು ಹಿರಿಹಿರಿ ಹಿಗ್ಗಿದರು.

ಗಣೇಶ ಮೆರವಣಿಗೆ ಆಕರ್ಷಕ ಕಳೆ ತಂದಿದ್ದು ಝಗಮಗಿಸುವ ವಿದ್ಯುತ್ ಅಲಂಕಾರಿಕ ದೀಪಗಳು. ಗಣೇಶ ಮೂರ್ತಿ ಆಕರ್ಷಕವಾಗಿ ಕಾಣಿಸಲೆಂದು ಝಗಮಗಿಸುವ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ಲೇರ್ಸ ಲೈಟ್ ಅಳವಡಿಸಿರುವುದು ಈ ಬಾರಿಯ ಆಕರ್ಷಣೆಯಾಗಿತ್ತು. ಲೈಟ್ ಬೆಳಕಿನಲ್ಲಿ ಯುವಕರು ಖುಷಿ ಖುಷಿಯಾಗಿ ಕುಳಿದು ಕುಪ್ಪಳಿಸಿದರು. ಬಿಗಿ ಬಂದೋಬಸ್ತ್:

ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ನಗರದ ವಿವಿಧ ಕಡೆಗಳಲ್ಲಿ ವಿಶೇಷವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಾರ್ವಜನಿಕ ಗಣೇಶ ಉತ್ಸವ ಮಂಡಳ ಪದಾಧಿಕಾರಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದ ಗಣೇಶ ಮೂರ್ತಿಗಳನ್ನು ಸ್ವಾಗತಿಸಿದರು. ಗಣೇಶೋತ್ಸವ ವಿಸರ್ಜನೆ ಸಂದರ್ಭ ಪೊಲೀಸ್ ಇಲಾಖೆ ಜೊತೆ ಕೈಜೋಡಿಸಿ ಯಾವುದೇ ಅಡೆತಡೆ, ಗಲಭೆ, ಗೊಂದಲವಾಗದಂತೆ ಸ್ಥಳೀಯ ಸಂಘ-ಸಂಸ್ಥೆಗಳು, ಗಣೇಶ ಮಂಡಳಗಳು ಟೆಂಟ್‌ಗಳನ್ನು ಹಾಕಿಕೊಂಡು ಬೇಗಬೇಗ ತೆರಳಿದ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಿಗೆ ಮಾಲೆ ಹಾಕುವ ಮತ್ತು ಸ್ವಾಗತಿಸಿ ಬೀಳ್ಕೊಡಲಾಯಿತು.ಪಾದರಕ್ಷೆ ಬಿಟ್ಟು ವೇದಿಕೆಯಲ್ಲಿ ಕುಳಿತ ಡಿಸಿ ರೋಷನ್‌

ಗಣೇಶ ಚತುರ್ಥಿಯಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸೌಹಾರ್ದತೆಯ ಸಂದೇಶ ರವಾನೆ ಮಾಡಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು 11 ದಿನದ ಸಾರ್ವಜನಿಕ‌ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ತಾವು‌ ಧರಿಸಿದ ಶೂ ಬಿಟ್ಟು ಕುಳಿತು ಗಣೇಶನಿಗೆ ಭಕ್ತಿಯ ಗೌರವ ಸೂಚಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.ವೇದಿಕೆಯ ಮೇಲೆ ಎಲ್ಲ ಪಕ್ಷದ ಶಾಸಕ, ಮಾಜಿ ಶಾಸಕರು ಇದ್ದರೂ ಆದರೆ, ಎಲ್ಲರೂ ಚಪ್ಪಲ್ಲಿ, ಶೂ ಧರಿಸಿದ್ದರು. ಆದರೆ, ಡಿಸಿ ರೋಷನ್ ಬರಿಗಾಲಿನಲ್ಲಿದ್ದರು. ಇವರ ನಡೆಗೆ ಅಲ್ಲಿ ನೆರದಿದ್ದ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಮಾತನಾಡಿದ ಡಿಸಿ ಮೊಹಮ್ಮದ್‌ ರೋಷನ್‌ ಅವರು, ಬೆಳಗಾವಿಯ ಸಾರ್ವಜನಿಕ ಗಣೇಶ ವಿಸರ್ಜನೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡೋಣ. ಶಾಂತಿ ಸೌಹಾರ್ದತೆಯಿಂದ ವಿಜರ್ಸನೆ ಮಾಡೋಣ. ಕಾನೂನು ಸುವ್ಯವಸ್ಥೆ ಧಕ್ಕೆ ಬರದಂತೆ ಆಚರಣೆ ಮಾಡೋಣ ಎಂದು ಸಂದೇಶ ಸಾರಿದರು.

Share this article