ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಬುಧವಾರ ನಗರದ ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಸೇರಿದಂತೆ ಇಂದು ರಾಜ್ಯ ಶಿಲ್ಪಕಲಾಕಾರರು ವಿಶ್ವದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ವಿನಯ್ ಕಾಳಚಾರ್ ಅಮೇರಿಕದ ವಾಷಿಂಗ್ಟ್‍ನ್‍ನಲ್ಲಿ 20 ಅಡಿ ಎತ್ತರ ಕನ್ನಡ ಭುವನೇಶ್ವರಿ ಶಿಲ್ಪಕಲಾ ಮೂರ್ತಿ ಕೆತ್ತನೆ ಮಾಡಿ ಕನ್ನಡದ ಸೊಬಗನ್ನು ಬಿಂಬಿಸಿದ್ದಾರೆ ಎಂದರು.ಹೊಯ್ಸಳರ ಕಾಲದ ಬೇಲೂರು, ಹಳೇಬಿಡು, ವಿಜಯನಗರ ಸಾಮ್ರಾಜ್ಯದ ಹಂಪಿ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲಾಗಿದೆ. ಇಂತಹ ಅದ್ಭುತ ದೇವಾಲಯಗಳನ್ನು ನಿರ್ಮಿಸಿ ನಾಡಿನ ವಾಸ್ತುಶಿಲ್ಪಕ್ಕೆ ವಿಶ್ವಕರ್ಮರು ಅಪಾರ ಕೊಡುಗೆ ನೀಡಿದ್ದಾರೆ. ಸಾವಿರಾರು ವರ್ಷಗಳ ವಾಸ್ತುಶಿಲ್ಪ ಕಲೆಯನ್ನು ಇಂದಿಗೂ ವಿಶ್ವಕರ್ಮರು ಜೀವಂತ ಇರಿಸಿದ್ದಾರೆ. ಪ್ರಸ್ತುತ ವಿಶ್ವಕರ್ಮ ಸಮುದಾಯದವರು ಆಧುನಿಕ ಶಿಕ್ಷಣದ ಜೊತೆಗೆ ಮೂಲ ಕುಲ ಕಸುಬುಗಳನ್ನು ಸಹ ಕಾಪಾಡಿ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು.
ತಹಸೀಲ್ದಾರ್ ಗೋವಿಂದರಾಜ್ ಮಾತನಾಡಿ, ಜಿಲ್ಲಾಡಳಿತದಿಂದ ವರ್ಷಕ್ಕೆ 36ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮಹನೀಯರ ತತ್ವ-ಆದರ್ಶಗಳನ್ನು ಪಾಲನೆ ಮಾಡಬೇಕು. ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.
ನಗರದ ಮುರುಘಾ ಮಠದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಕಾಯಕವನ್ನು ನಿಷ್ಠೆಯಿಂದ ಮಾಡುವ ವಿಶ್ವಕರ್ಮ ಸಮುದಾಯ ಕೆಲಸದಲ್ಲಿಯೇ ದೇವರನ್ನು ಕಾಣುತ್ತದೆ. ಇಂತಹ ವರ್ಗಗಳಿಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 2ಎ ಅಡಿ ಮೀಸಲಾತಿ ನೀಡಿ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ನಾಂದಿ ಹಾಡಿದರು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೆ.ಪಿ.ರವೀಂದ್ರನಾಥಾಚಾರ್ ಉಪನ್ಯಾಸ ನೀಡಿದರು. ಉಮೇಶ್ ಪತ್ತಾರ ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಈಶ್ವರ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಕೆ.ಟಿ.ಸುರೇಶಾಚಾರ್ಯ, ವಿಶ್ವಕರ್ಮ ಕಾಳಿಕಾಂಬ ಕಲ್ಯಾಣ ಮಂಟಪ ಟ್ರಸ್ಟ್ ಎ.ಶಂಕರಾಚಾರ್ ಸೇರಿದಂತೆ ಮತ್ತಿರರು ಇದ್ದರು.