ಭಾರತದ ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ: ಸಮುದಾಯದ ಮುಖಂಡ ಶ್ರೀನಿವಾಸ ಆಚಾರ್ಯ

KannadaprabhaNewsNetwork | Updated : Sep 18 2024, 01:52 AM IST

ಸಾರಾಂಶ

ಸ್ಮಾರಕಗಳನ್ನು ನಿರ್ಮಿಸಿರುವ ನಮ್ಮ ಪೂರ್ವಿಕರ ಶ್ರಮ ಮತ್ತು ಸೃಜನಾತ್ಮಕ ಕಲೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಸಮುದಾಯದ ಮುಖಂಡರಾದ ಶ್ರೀನಿವಾಸ ಆಚಾರ್ಯ ಅಭಿಪ್ರಾಯಪಟ್ಟರು. ರಾಮನಗರದಲ್ಲಿ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.

ಕಾಳಿಕಾಂಬ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ರಾಮನಗರ

ನಮ್ಮ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಪ್ರಾಚೀನ ಸ್ಮಾರಕಗಳು ಮತ್ತು ಮಹಲ್ಲುಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಸ್ಮಾರಕಗಳನ್ನು ನಿರ್ಮಿಸಿರುವ ನಮ್ಮ ಪೂರ್ವಿಕರ ಶ್ರಮ ಮತ್ತು ಸೃಜನಾತ್ಮಕ ಕಲೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಸಮುದಾಯದ ಮುಖಂಡರಾದ ಶ್ರೀನಿವಾಸ ಆಚಾರ್ಯ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ವಿಜಯನಗರ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಮುದಾಯವು ಹಿಂದಿನ ಕಾಲದಿಂದಲೂ ಐದು ಕಸುಬುಗಳನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದೆ. ಈ ಐದು ವೃತ್ತಿಗಳು ಮನುಷ್ಯನ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ವೃತ್ತಿಯಾಗಿವೆ. ಪುರಾಣಗಳ ಪ್ರಕಾರ ವಿಶ್ವಕರ್ಮರು ಇಡೀ ಪ್ರಪಂಚವನ್ನು ಸೃಷ್ಟಿಸಿದವರು. ರಾಮಾಯಾಣದಲ್ಲಿ ಬರುವ ಶ್ರೀಲಂಕ ಹಾಗೂ ಮಹಾಭಾರತದ ಬರುವ ಇಂದ್ರಪ್ರಸ್ಥ ಪ್ರದೇಶಗಳಲ್ಲಿ ಭವ್ಯ ಅರಮನೆಯನ್ನು ವಿಶ್ವಕರ್ಮರು ನಿರ್ಮಿಸಿದ್ದನ್ನು ಕಾಣಬಹುದು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ 2016 ರಲ್ಲಿ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೆ ತಂದಿತು. ಇಂದಿನ ಆಧುನಿಕ ಎಂಜಿನಿಯರುಗಳು ಅಸಾಧ್ಯವೆನ್ನುವ ಅನೇಕ ರೀತಿಯ ಕಲೆಯನ್ನು ಬಹಳ ಹಿಂದೆಯೇ ನಮ್ಮ ದೇಶದಿಂದ ಇಡೀ ವಿಶ್ವಕ್ಕೆ ಪರಿಚಯಿಸಿದವರು. ವಿಶ್ವಸಂಸ್ಥೆಯ ವಿಶ್ವಪಾರಂಪರ್ಯ ಪಟ್ಟಿಗೆ ಸೇರಿರುವ ಅನೇಕ ಕಲ್ಲಿನ ಕೆತ್ತನೆಗಳು ಇಂದಿಗೂ ಪ್ರಪಂಚದ ಅತ್ಯುತ್ತಮ ಕಲೆಗೆ ನಿದರ್ಶನವಾಗಿವೆ ಎಂದು ಶ್ರೀನಿವಾಸ ಆಚಾರ್ಯ ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕ್ರೀಂಡಾಗಣದಿಂದ ವಿಜಯನಗರ ಕಾಳಿಕಾಂಬ ದೇವಸ್ಥಾನದವರೆಗೆ ಬೆಳ್ಳಿರಥದಲ್ಲಿ ದೇವರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಚಾಲನೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿದೇರ್ಶಕ ರಮೇಶ್‌ಬಾಬು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಜೆ.ಅರ್ಪಿತಾ, ತಾಲೂಕು ವ್ಶೆದ್ಯಾಧಿಕಾರಿ ಡಾ.ಉಮಾ, ಡಾ.ಮಧುಮತಿ, ಸಾಹಿತಿ ಶೈಲಾಜ, ಸಮುದಾಯದ ಮುಖಂಡರಾದ ಪಿ.ಉಮೇಶ್, ರಾಧಾಕೃಷ್ಣ, ಮುತ್ತುರಾಜ್, ಶ್ರೀನಿವಾಸ್ ತಗಡಚಾರ್, ಲಿಂಗಚಾರ್, ಅಪ್ಪಾಜಿಚಾರ್, ಬಸವರಾಜಚಾರ್ ಇದ್ದರು.

Share this article