ಕಾರವಾರ: ಆರು ಬಾರಿ ವಿಧಾನಸಭೆ ಚುನಾವಣೆ ಗೆದ್ದು, ಸಚಿವ ಸ್ಥಾನ, ಸ್ಪೀಕರ್ ಹುದ್ದೆ ನಿಭಾಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 7ನೇ ಬಾರಿ ಗೆಲ್ಲುವ ಅನಂತಕುಮಾರ ಹೆಗಡೆ ಅವರ ಕನಸು ಭಗ್ನವಾಗಿದೆ. ಕಾಗೇರಿ ಹಾಗೂ ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ ಅವರ ನಡುವೆ ಹೋರಾಟಕ್ಕೆ ಚುನಾವಣಾ ಕಣ ಸಿದ್ಧವಾದಂತಾಗಿದೆ.7 ಬಾರಿ ಸ್ಪರ್ಧಿಸಿ, 6 ಸಲ ಗೆದ್ದಿರುವ ಅನಂತಕುಮಾರ ಹೆಗಡೆ ಈ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದು, ತಿಂಗಳಿನಿಂದ ಚುರುಕಾಗಿ ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿದ್ದರು. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ಅನಂತಕುಮಾರ ಹೆಗಡೆ ಅವರನ್ನು ಕೈಬಿಟ್ಟು ಕಾಗೇರಿ ಅವರಿಗೆ ಟಿಕೆಟ್ ಘೋಷಿಸಿದೆ.ಅಂಕೋಲಾ ಕ್ಷೇತ್ರದಿಂದ ಮೂರು ಬಾರಿ ಹಾಗೂ ಶಿರಸಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವರಾಗಿ, ವಿಧಾನಸಭೆ ಸ್ವೀಕರ್ ಆಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದು ಜಿಲ್ಲಾದ್ಯಂತ ಚಿರಪರಿಚಿತರಾಗಿದ್ದಾರೆ.
ಅನಂತಕುಮಾರ ಹೆಗಡೆಗೆ ಟಿಕೆಟ್ ತಪ್ಪಲು ಕಾರಣ ಹಲವು
ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈತಪ್ಪಲು ಹಲವು ಕಾರಣಗಳಿವೆ. ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಮೀರಿತ್ತು.ವಿಧಾನಸಭೆ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಬರದೆ ತೆಪ್ಪಗೆ ಕುಳಿತರು. ಅಷ್ಟೇ ಅಲ್ಲ, ಹೆಗಡೆ ಬೆಂಬಲಿಗರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆಯೂ ಕೇಳಿ ಬಂದಿತ್ತು. ಇದು ಕಾರವಾರ, ಶಿರಸಿ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.ಪ್ರಧಾನಿ ನರೇಂದ್ರ ಮೋದಿ ಅಂಕೋಲಾಕ್ಕೆ ಪ್ರಚಾರಕ್ಕೆ ಬಂದಾಗಲೂ ಅನಂತಕುಮಾರ ಹೆಗಡೆ ಅತ್ತ ಸುಳಿಯಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿಧಾನಸಭೆ ಚುನಾವಣೆಯಲ್ಲಿ ಹೆಗಡೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವುದಕ್ಕಿಂತ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಿಂತರು ಎನ್ನುವ ಗಂಭೀರ ಆರೋಪ ಕೇಳಿಬಂತು. ನಂತರ ಅನಂತಕುಮಾರ ಹೆಗಡೆ ಕಾರವಾರಕ್ಕೆ ಬಂದಾಗ ಕಾಂಗ್ರೆಸ್‌ನಿಂದ ಆಯ್ಕೆಯಾದ ಶಾಸಕ ಸತೀಶ ಸೈಲ್ ಅವರನ್ನು ಬಹಿರಂಗವಾಗಿ ಆಲಂಗಿಸಿಕೊಂಡಿದ್ದು ಈ ಆರೋಪಕ್ಕೆ ಪುಷ್ಟಿ ನೀಡುವಂತಿತ್ತು.ಅನಂತಕುಮಾರ ಹೆಗಡೆ ನಾಲ್ಕೂವರೆ ವರ್ಷಗಳಿಂದ ರಾಜಕೀಯ ಚಟುವಟಿಕೆಯಿಂದ ದೂರವಾಗಿ ಉಳಿದರು. ಹೆಗಡೆ ಅವರ ನಿಷ್ಕ್ರಿಯತೆಯಿಂದಾಗಿಯೇ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಸಕ್ರಿಯರಾದರು. ಅದಿಲ್ಲದಿದ್ದರೆ ಪ್ರತಿ ಬಾರಿಯೂ ಬಿಜೆಪಿಯಲ್ಲಿ ಲೋಕಸಭೆ ಕ್ಯಾಂಡಿಡೇಟ್ ಅಂದರೆ ಅದು ಅನಂತಕುಮಾರ ಹೆಗಡೆ ಮಾತ್ರ ಎಂಬಂತಾಗಿತ್ತು.ಈ ಬಾರಿ ಆಕಾಂಕ್ಷಿಗಳ ಪೈಪೋಟಿಯನ್ನು ನೋಡಿ ಸ್ಥಿಮಿತ ಕಳೆದುಕೊಂಡ ಹೆಗಡೆ ಚುನಾವಣೆ ಗೆಲ್ಲುವ ಸಶಕ್ತ ಯುವಕರಿಗೆ ಧಮ್ ಇದ್ದರೆ ಬನ್ನಿ. ಕುರ್ಚಿ ಬಿಟ್ಟು ಕೊಡುತ್ತೇನೆ ಎಂದು ಟೇಬಲ್ ಮೇಲೆ ಕುರ್ಚಿ ಇದ್ದು ಸ್ವಪಕ್ಷೀಯರಿಗೆ ಸವಾಲು ಹಾಕುವ ಧಾಟಿಯಲ್ಲಿ ಗುಡುಗಿದ್ದರು.ಪ್ರತಿ ಚುನಾವಣೆಯಲ್ಲೂ ಸಲೀಸಾಗಿ ಟಿಕೆಟ್ ಪಡೆಯುತ್ತಿದ್ದ ಅನಂತಕುಮಾರ ಹೆಗಡೆ ಈ ಬಾರಿ ತಿಂಗಳ ಕಾಲ ಬೆವರಿಳಿಸಿದರು. ಪ್ರತಿ ತಾಲೂಕಿಗೆ ಹೋಗಿ ಕಾರ್ಯಕರ್ತರ ಸಭೆ ನಡೆಸಿದರು. ಕೆಲವು ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದರು. ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದರು. ಮೋದಿ ಅವರನ್ನು ಬಾಯ್ತುಂಬ ಹೊಗಳಿದರು. ಶತಾಯಗತಾಯ ಹೈಕಮಾಂಡಿನ ಗಮನ ಸೆಳೆದು ಟಿಕೆಟ್ ಪಡೆಯಲು ಹಲವು ಕಸರತ್ತು ನಡೆಸಿದರು.ಈಗ ಅನಂತಕುಮಾರ ಹೆಗಡೆ ಈ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷದ ಪರವಾಗಿ ದುಡಿಯಲಿದ್ದಾರೆಯೇ ಅಥವಾ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.ಅನಂತಕುಮಾರ ಹೆಗಡೆ ವಿದಾಯದ ನುಡಿ
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೆಗಡೆಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಕೈತಪ್ಪುತ್ತಿದ್ದಂತೆ ಸಂಸದ ಅನಂತಕುಮಾರ ಹೆಗಡೆ ವಿದಾಯದ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ನೀಡಿದ್ದಾರೆ.