ಬಳ್ಳಾರಿ: ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ತಪ್ಪದೇ ವೀಕ್ಷಿಸಬೇಕು. ಪ್ರವಾಸಿ ತಾಣಗಳ ವೀಕ್ಷಣೆಯಿಂದ ಮನಸ್ಸಿಗೆ ಆಹ್ಲಾದಕರ ಅನುಭವದ ಜೊತೆಗೆ ಪ್ರವಾಸಿ ತಾಣಗಳ ಐತಿಹಾಸಿಕ ಮಹತ್ವ ಅರಿಯಲು ಸಾಧ್ಯವಾಗಲಿದೆ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘದ ಸಹಯೋಗದೊಂದಿಗೆ ನಗರದ ಐತಿಹಾಸಿಕ ಕೋಟೆ ಮುಂಭಾಗದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆ ವಿಭಜನೆ ಬಳಿಕ ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ತುಂಗಭದ್ರಾ ಜಲಾಶಯಗಳು ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಂಡಿವೆ. ಆದಾಗ್ಯೂ ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಪ್ರಾಗೈತಿಹಾಸಿಕ ದೇವಸ್ಥಾನಗಳು, ಪಾರಂಪರಿಕ ಕಟ್ಟಡಗಳು, ಭವ್ಯ ಇತಿಹಾಸ ಇರುವ ಅನೇಕ ತಾಣಗಳಿವೆ. ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಸ್ವಾಮಿಮಲೈ ಅರಣ್ಯ ಕ್ಷೇತ್ರ, ನಾರಿಹಳ್ಳ ಜಲಾಶಯ, ಬಳ್ಳಾರಿಯ ಐತಿಹಾಸಿಕ ಕೋಟೆ, ಮಿಂಚೇರಿ ಬೆಟ್ಟ, ಸಂಗನಕಲ್ಲು ಗುಡ್ಡ, ಸಿರುಗುಪ್ಪದ ಕೆಂಚನಗುಡ್ಡ, ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಭೇಟಿ ನೀಡಬಹುದು ಎಂದರು.ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ದೇಶ-ದೇಶಗಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆಯಲು ಪ್ರವಾಸೋದ್ಯಮವು ಸಹಕಾರಿಯಾಗಿದೆ. ಬಳ್ಳಾರಿ ಸೇರಿದಂತೆ ರಾಜ್ಯದ ಅನೇಕ ಪ್ರವಾಸಿ ತಾಣಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ, ಪ್ರವಾಸಿ ಸ್ಥಳಗಳ ಮಹತ್ವವವನ್ನು ದಾಖಲು ಮಾಡಿಕೊಂಡು ಮನನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಪುಸ್ತಕದ ಓದಿನ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಮಾತ್ರ ಜಗತ್ತಿನ ಸಾಂಸ್ಕೃತಿಕ, ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.ಜಿಲ್ಲೆಯ ಡಿಎಂಎಫ್ ಅನುದಾನಡಿ 9ನೇ ತರಗತಿ ಶಾಲಾ ಮಕ್ಕಳಿಗೆ “ಆಡಳಿತ ಪ್ರವಾಸೋದ್ಯಮ” ಯೋಜನೆಯಡಿ ಸಂಡೂರು ನೈಸರ್ಗಿಕ ಪ್ರವಾಸಿ ತಾಣ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ರಾಬರ್ಟ್ ಬ್ರೂಸ್‌ಫೂಟ್ ಪ್ರಾಕ್ತನ ವಸ್ತು ಸಂಗ್ರಾಲಯ ಸೇರಿದಂತೆ ನಾನಾ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಪ್ರವಾಸಿ ಮಿತ್ರ ರಕ್ಷಣಾ ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರ ವಿತರಿಸಲಾಯಿತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ರವೀಂದ್ರ, ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ವಿಕ್ರಮ್ ಪೋಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಶ್ರೀಹರಿ ಮಾಸನೂರು ಸೇರಿದಂತೆ ಸಿಬ್ಬಂದಿ, ಪ್ರವಾಸಿ ಮಾರ್ಗದರ್ಶಕರು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.