ಕನ್ನಡಪ್ರಭ ವಾರ್ತೆ, ಭದ್ರಾವತಿ
ಅಂದು ಮೈಸೂರು ಮಹಾರಾಜರು ತಮ್ಮ ಆಡಳಿತ ಅವಧಿಯಲ್ಲಿ ವಿನಾಕಾರಣ ರಾಜ್ಯ ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲ. ಸದಾ ಕಾಲ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು. ಅವರು ಕೈಗೊಂಡಿರುವ ಕಾರ್ಯಗಳು ಇಂದಿಗೂ ಉಳಿದುಕೊಂಡಿವೆ ಎಂದು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಮರಿಸಿದರು.ಶನಿವಾರ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ 100 ವರ್ಷ ಪೂರೈಸಿರುವ ಹಿನ್ನೆಲೆ ಹಿರಿಯ ಚಲನ ಚಿತ್ರನಟ, ನಿವೃತ್ತ ಉದ್ಯೋಗಿ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ನಗರದ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶತಮಾನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಾಯರ ಕೊಡುಗೆ ಅಪಾರವಾಗಿದೆ. ಅಂದು ಮಹಾರಾಜರು ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡಿದ್ದು ಬಿಟ್ಟರೇ, ಎಂದಿಗೂ ರಾಜ್ಯ ಬಿಟ್ಟು ಹೊರಗೆ ಹೋದವರಲ್ಲ. ಅವರು ಕೆಲವು ಬಾರಿ ವಿಶ್ರಾಂತಿಗಾಗಿ ಕೆಮ್ಮಣ್ಣುಗುಂಡಿ ಮತ್ತು ಜೋಗ ಜಲಪಾತ ಸೇರಿದಂತೆ ಸುತ್ತಮುತ್ತಲ ಪ್ರಾಕೃತಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅವರು ಅವಧಿಯಲ್ಲಿ ನಿರ್ಮಿಸಿರುವ ಅತಿಥಿ ಗೃಹಗಳೇ ಇವುಗಳಿಗೆ ಸಾಕ್ಷಿಯಾಗಿದೆ ಎಂದರು.ನಮ್ಮ ಪೂರ್ವಕರ ಕೊಡುಗೆಯಾಗಿರುವ ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ ಉಳಿಸಿಕೊಳ್ಳುವ ನಿಮ್ಮಲ್ಲರ ಹೋರಾಟದ ಪ್ರಯತ್ನದಲ್ಲಿ ನಾನು ಸಹ ಜೊತೆಯಲ್ಲಿರುವೆ ಎಂದು ಭರವಸೆ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಿಲ್ಲೆಯ ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಕಾರ್ಖಾನೆ ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ವಿಐಎಸ್‌ಎಲ್ ಕೇವಲ ಕಾರ್ಖಾನೆಯಾಗಿ ಉಳಿದಿಲ್ಲ. ನಮ್ಮೆಲ್ಲರ ಬಾಂಧವ್ಯದ ಕೊಂಡಿಯಾಗಿದೆ. ಈ ಕಾರ್ಖಾನೆ ರಾಜ್ಯಕ್ಕೆ, ದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಬೇಕಾದ ಕಾರ್ಖಾನೆಯಾಗಿದೆ. ಇದನ್ನು ಉಳಿಸಿಕೊಳ್ಳಲು ಎಲ್ಲರೂ ನಿರಂತರ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಮ್ಮೆಲ್ಲರ ನಾಯಕರಾದ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಈಗಲೂ ಪ್ರಯತ್ನ ಮುಂದುವರೆದಿದೆ. ಭವಿಷ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುವ ವಿಶ್ವಾಸವಿದೆ ಎಂದರು.
ಮೈಸೂರು ಸುತ್ತೂರು ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದರು.ವಿಧಾನ ಪರಿಷತ್ತು ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ಯುವ ಮುಖಂಡ ಮಂಗೋಟೆ ರುದ್ರೇಶ್, ನಗರಸಭೆ ಸದಸ್ಯರಾದ ಚನ್ನಪ್ಪ, ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.
ಉದ್ಯಮಿ ಡಾ.ವಿಜಯಸಂಕೇಶ್ವರ ಹಾಗೂ ಸರ್ ಎಂ.ವಿಶ್ವೇಶ್ವರಾಯರವರ ಮೊಮ್ಮಗ ಮೋಕ್ಷಗೊಂಡಂ ಶೇಷಾದ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ ಅಧ್ಯಕ್ಷತೆವಹಿಸಿದ್ದರು. ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಂ.ವಿ ರೇವಣ್ಣ ಸಿದ್ದಯ್ಯ ಸ್ವಾಗತಿಸಿದರು.ಕಾರ್ಖಾನೆ ಗುತ್ತಿಗೆ, ಕಾಯಂ ಹಾಗೂ ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕಾರ್ಮಿಕ ಸಂಘಟನೆಗಳ, ಸಂಘ-ಸಂಸ್ಥೆಗಳ ಪ್ರಮುಖರು, ಮಹಿಳಾ ಸಂಘಟನೆಗಳ ಪ್ರಮುಖರು ಹಾಗೂ ಹೊರದೇಶ ಹಾಗೂ ಹೊರ ರಾಜ್ಯಗಳಲ್ಲಿ ನಿವೃತ್ತ ಕಾರ್ಮಿಕರು, ಕುಟುಂಬದವರು ಸೇರಿದಂತೆ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
- - --ಡಿ4ಬಿಡಿವಿಟಿ: ಭದ್ರಾವತಿಯಲ್ಲಿ ಶನಿವಾರ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.-ಡಿ4ಬಿಡಿವಿಟಿ(ಎ): ಭದ್ರಾವತಿಯಲ್ಲಿ ಶನಿವಾರ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸನ್ಮಾನಿಸಲಾಯಿತು. -ಡಿ4ಬಿಡಿವಿಟಿ(ಬಿ): ಭದ್ರಾವತಿಯಲ್ಲಿ ಶನಿವಾರ ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇಶ್ವರಾಯ ಅವರ ಮೊಮ್ಮಗ ಮೋಕ್ಷಗೊಂಡಂ ಶೇಷಾದ್ರಿ ಅವರನ್ನು ಸನ್ಮಾನಿಸಲಾಯಿತು.