ಕಾರವಾರ:ಸರ್ಕಾರಿ ಶಾಲೆಯಲ್ಲಿ ಎಷ್ಟು ಮಕ್ಕಳಿದ್ದಾರೆ ಗೊತ್ತಿಲ್ಲ ಎಂದರೆ ನೀವೆಂತಹ ಅಧಿಕಾರಿ?. ಕಾಟಾಚಾರಕ್ಕೆ ಅಧಿಕಾರಿಯಾಗಿ ಇರಬೇಡಿ. ನಿಮ್ಮ ಬಳಿ ಆಗದೇ ಇದ್ದರೆ ನಾವು ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಶಿರಸಿ ಡಿಡಿಪಿಐ ವಿರುದ್ಧ ಕಿಡಿಕಾರಿದರು.
ಇಲ್ಲಿನ ಜಿಪಂನಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಲು ತಡಕಾಡಿದಾಗ ಕುಪಿತಗೊಂಡರು. ನಾವು ಬಾಯಿನಲ್ಲಿ ಹೇಳುವುದಿಲ್ಲ. ಕೆಲಸ ಮಾಡಿ ತೋರಿಸುತ್ತೇವೆ. ಮನಸ್ಸಿಲ್ಲದಿದ್ದರೆ ಇಲ್ಲಿಂದ ಹೋಗಿ ಎಂದು ಆಕ್ರೋಶ ಹೊರಹಾಕಿದರು.ಶಿರಸಿ ಡಿಡಿಪಿಐ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳ ಮಾಹಿತಿ ಹೇಳಲು ತಡಕಾಡಿದಾಗ ಸಚಿವರು ಕೋಪಗೊಂಡರು. ೧೦ನೇ ತರಗತಿ ಪರೀಕ್ಷೆಯಲ್ಲಿ ಎಷ್ಟು ಪರ್ಸಂಟೇಜ್ ಮಾಡುತ್ತೀರಿ ಎಂದು ಕೇಳಿದಾಗ ಈ ಬಾರಿ ಶೇ. ೯೦ರಷ್ಟು ಮಾಡುತ್ತೇವೆ ಎಂದರು. ಆಗ ಸಚಿವರು ಇಷ್ಟೊಂದು ನಿರ್ಲಕ್ಷ್ಯ ಸರಿಯಲ್ಲ. ನಿಮ್ಮ ಇಲಾಖೆ ಇಷ್ಟು ಕೆಟ್ಟುಹೋಗಿದೆಯೇ? ೨೪ ಗಂಟೆ ನಿಮಗೆ ಇದೆ ಕೆಲಸ ಅಲ್ಲವೆ? ಬೇರೆ ಕೆಲಸ ಇದೆಯೇ? ಶೇ. ೧೦೦ಕ್ಕೆ ನೂರು ಫಲಿತಾಂಶ ಮಾಡಬೇಕು. ಶೇ. ೯೦ ಆಗುತ್ತದೆ ಎಂದರೆ ನೀವು ಇರುವುದು ಏಕೆ? ಮಕ್ಕಳ ಭವಿಷ್ಯ ಏನು? ಪಾಲಕರು ಏನು ಮಾಡಬೇಕು. ಎಸ್ಸೆಸ್ಸೆಲ್ಸಿಯಲ್ಲಿ ಮಕ್ಕಳ ಸಂಖ್ಯೆ ಗೊತ್ತಿಲ್ಲ. ೧೦ನೇ ತರಗತಿಯಲ್ಲಿ ಫಲಿತಾಂಶ ಕಡಿಮೆ ಆದರೆ ನೀವಿಬ್ಬರು ಈ ಜಿಲ್ಲೆಯಿಂದ ಜಾಗ ಖಾಲಿ ಮಾಡಲು ರೆಡಿ ಆಗಿ ಎಂದು ತಾಕೀತು ಮಾಡಿದರು.ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ೮-೧೦ ಮಕ್ಕಳಿದ್ದಾಗ ಪಠ್ಯ, ಪಠ್ಯೇತರ ಒಳಗೊಂಡು ಯಾವುದೇ ಚಟುವಟಿಕೆಯಲ್ಲಿ ಪೈಪೋಟಿ ಇರುವುದಿಲ್ಲ. ೧೦ಕ್ಕಿಂತ ಕಡಿಮೆ ಇದ್ದರೆ ಕ್ಲಸ್ಟರ್ ಮಾಡಿ ಸೇರಿಸಬೇಕು. ಸಾರಿಗೆ ಒಳಗೊಂಡು ಮೂಲ ಸೌಕರ್ಯದ ವ್ಯವಸ್ಥೆ ಆಗಬೇಕು. ಹಾಗಾದಲ್ಲಿ ಮಾತ್ರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಆಗುತ್ತದೆ ಎಂದು ಅಭಿಪ್ರಾಯಿಸಿದರು.ಡಿಎಚ್‌ಒ ಡಾ. ಬಿ.ವಿ. ನೀರಜ್ ಮಾತನಾಡಿ, ಜಿಲ್ಲೆಯಲ್ಲಿ ೧೫ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರಿಲ್ಲ. ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿನ ವೈದ್ಯರ ಕೊರತೆಯಿದೆ. ಆಸ್ಪತ್ರೆ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ಆಗ ಸಚಿವರು, ಎಲ್ಲ ಕೆಲಸ ಬಂದ್ ಮಾಡಲು ಗುತ್ತಿಗೆದಾರನಿಗೆ ಹೇಳಿ, ಇಲ್ಲ ಯಾವಾಗ ಕೊಡುತ್ತಾರೆ ಎಂದು ಬರೆದುಕೊಡಲಿ. ಇದೇ ರೀತಿ ಮಾಡಿದರೆ ಕಾಮಗಾರಿ ಮುಗಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.ವೈದ್ಯಕೀಯ ಕಾಲೇಜಿನ ಡೀನ್ ಡಾ. ಗಜಾನನ ನಾಯಕ ಸಭೆಗೆ ಬರದೇ ಇರುವುದಕ್ಕೆ ಸಚಿವರು ಕಿಡಿಕಾರಿದರು. ಸಭೆಗೆ ಆಗಮಿಸಿದ್ದ ಡಾ. ಶಿವಾನಂದ ಕುಡ್ತರಕರ ಅವರ ಬಳಿ, ಡೀನ್ ಕಳೆದ ಸಭೆಗೆ ಬಂದಿಲ್ಲ. ನಮ್ಮ ವ್ಯಾಪ್ತಿಗೆ ನೀವು ಬರುವುದಿಲ್ಲ ಎಂದರೆ ಎದ್ದು ಹೋಗಿ ಎಂದರು. ಶಾಸಕ ಭೀಮಣ್ಣ, ನಿಮ್ಮ ಮೆಡಿಕಲ್ ಕಾಲೇಜು ಉತ್ತಮವಾಗಿದೆ ಎಂದು ಯಾರಾದರು ಚಿಕಿತ್ಸೆಗೆ ಬಂದ್ದಾರೆಯೆ? ಬೇಜವಾಬ್ದಾರಿ ಮಾತನಾಡಿದ್ದೀರಿ. ಉತ್ತಮ ಚಿಕಿತ್ಸೆಯಿದ್ದರೆ ಏಕೆ ಹೊರ ಜಿಲ್ಲೆಗೆ ನಮ್ಮ ಜನ ಹೋಗುತ್ತಾರೆ ಎಂದು ಪ್ರಶ್ನಿಸಿದರು.ಸಚಿವ ವೈದ್ಯ, ನೀವು ನಿರ್ಲಕ್ಷ್ಯ ಮಾಡುವುದಕ್ಕೆ ಜನರು ಹೋರ ಜಿಲ್ಲೆಗೆ ಹೋಗುತ್ತಾರೆ. ನೀವು ಎಲ್ಲಿಯ ವರೆಗೆ ರೋಗಿಗಳಿಗೆ ಸ್ಪಂದಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಅಲ್ಲಿಯ ವರೆಗೆ ಅವರು ನಂಬುವುದಿಲ್ಲ. ನ. ೮ರಂದು ನಿಮ್ಮ ಆಸ್ಪತ್ರೆಯಲ್ಲಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು. ಶಾಸಕ ಸತೀಶ ಸೈಲ್, ಹೊರಗುತ್ತಿದಾರರ ಕಂಟ್ರೋಲ್‌ನಲ್ಲಿ ಕಾಲೇಜಿನ ವೈದ್ಯರಿದ್ದಾರೆ. ಸಾವಿರಕ್ಕೂ ಅಧಿಕ ಜನ ಹೊರಗುತ್ತಿಗೆಯಲ್ಲಿದ್ದಾರೆ. ಅವರನ್ನು ನಿಯಂತ್ರಿಸಬೇಕು. ಗುತ್ತಿಗೆದಾರ ಅಪಾಯಕಾರಿ ಇದ್ದಾರೆ. ಒಬ್ಬರಿಗೊಬ್ಬರು ಕೇಳುವವರಿಲ್ಲ. ಗುಂಪುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.ಎಂಡೋಸಲ್ಫಾನ್ ಬಗ್ಗೆ ಡಿಎಚ್‌ಒ ಮಾಹಿತಿ ನೀಡಿದಾಗ, ಸಚಿವ ವೈದ್ಯ, ಸ್ಕೋಡ್‌ವೆಸ್ ಸಂಸ್ಥೆಗೆ ಏಕೆ ಕೊಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಡಿಎಚ್‌ಒ ಎಂಡೋಸಲ್ಫಾನ್ ಸಂಚಾರಿ ವಾಹನಕ್ಕೆ ತಮ್ಮಿಂದ ಟೆಂಡರ್ ಕರೆಯಲಾಗುತ್ತದೆ. ಎರಡು ಸಂಸ್ಥೆ ಟೆಂಡರ್‌ನಲ್ಲಿ ಭಾಗವಹಿಸಿದ್ದು, ಉದ್ಭವ ಸಂಸ್ಥೆ ದಾಖಲೆ ಸರಿಯಿರಲಿಲ್ಲ. ಸ್ಕೊಡ್‌ವೆಸ್ ಸಂಸ್ಥೆಯ ಎಲ್ಲ ದಾಖಲೆ ಸರಿಯಿತ್ತು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಅಪೌಷ್ಟಿಕತೆ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಜಿಲ್ಲೆಯಲ್ಲಿ ೧ ಸಾವಿರಕ್ಕೂ ಅಧಿಕ ಜನರಿದ್ದಾರೆ ಎಂದು ಸಭೆಗೆ ತಿಳಿಸಿದರು. ಸಚಿವ ವೈದ್ಯ, ಒಂದು ತಿಂಗಳಲ್ಲಿ ಏಕೆ ಇಷ್ಟೊಂದು ಹೆಚ್ಚಾಗಿದೆ ಎಂದು ಕೇಳಿ ಡಿಎಚ್‌ಒ ಅವರಿಗೆ ತಂಡ ರಚಿಸಿ ಪರಿಶೀಲಿಸಲು ಸೂಚಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಅಂಗನವಾಡಿಗೆ ಹಾಲಿನ ಫೌಡರ್ ಪೂರೈಕೆ ಬಂದಾಗಿದೆ. ಕೆಎಂಎಫ್‌ನಿಂದ ಪೂರೈಕೆ ಆಗಬೇಕು. ಆದರೆ ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾಲಿನ ಫೌಡರ್ ಇಲ್ಲ ಎನ್ನುತ್ತಿದ್ದಾರೆ ಎನ್ನುತ್ತಿದ್ದಂತೆ ಶಾಸಕ ಸೈಲ್, ಡಿಸಿ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಚಿವರು ತಿಳಿಸಿದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಎಸ್‌ಪಿ ವಿಷ್ಣುವರ್ಧನ ಎನ್ ಹಾಗೂ ಜಿಲ್ಲೆಯ ಅಧಿಕಾರಿಗಳು ಇದ್ದರು.