ಕೋವಿ ವಾಪಸ್‌ ನೀಡದ ವಿಟ್ಲ ಪೊಲೀಸರನ್ನು ಮಂಗಗಳ ಓಡಿಸಲು ತೋಟಕ್ಕೇ ಕರೆಸಿದ ಕೃಷಿಕ!

KannadaprabhaNewsNetwork |  
Published : Apr 12, 2024, 01:00 AM IST
ವಿಟ್ಲದಲ್ಲೊಂದು ಸ್ವಾರಸ್ಯಕರ ಘಟನೆ | Kannada Prabha

ಸಾರಾಂಶ

ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಕಾರಣದಿಂದ ತೋಟಕ್ಕೆ ನುಗಿದ್ದ ಕೋತಿಯನ್ನು ಓಡಿಸಲು ೧೧೨ ತುರ್ತು ಪೊಲೀಸರನ್ನೇ ತೋಟಕ್ಕೆ ಕರೆಸಿದ ಘಟನೆ, ಪೊಲೀಸರ ಜೊತೆ ನಿಶಾಂತ್ ಬಿಲ್ಲಂಪದವು ನಡೆಸಿದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ ನ್ಯಾಯಾಲಯದ ಸೂಚನೆ ಇದ್ದರೂ ಠಾಣೆಯಲ್ಲಿ ಠೇವಣಿ ಇರಿಸಿದ್ದ ಕೋವಿಯನ್ನು ವಾಪಸ್‌ ನೀಡದ ವಿಟ್ಲ ಪೊಲೀಸರಿಗೆ ಕೃಷಿಕರೊಬ್ಬರು ಬಿಸಿ ಮುಟ್ಟಿಸಿದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ.

ಅಳಿಕೆ ಗ್ರಾಮದ ಕೃಷಿಕ ನಿಶಾಂತ ನಾರಾಯಣ ಅವರು ತಮ್ಮ ಕಾರ್ಯದ ಮೂಲಕ ಪೊಲೀಸರ ಕಣ್ತೆರೆಸಿದ್ದು, ಪೊಲೀಸರೇ ಮನೆಗೆ ಬಂದು ಕೋವಿಯನ್ನು ಮರಳಿಸಿದ್ದಾರೆ.

ಏನಿದು ಘಟನೆ..?: ಗ್ರಾಮೀಣ ಪ್ರದೇಶಗಳ ಕೃಷಿಕರು ಕಾಡು ಹಂದಿ ಹಾಗೂ ಕೋತಿಗಳ ಉಪಟಳ ನಿಗ್ರಹಿಸಲು ಪರವಾನಗಿ ಕೋವಿ ಇರಿಸಿಕೊಂಡಿರುತ್ತಾರೆ. ಅದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಚುನಾವಣೆಯ ಸಮಯದಲ್ಲಿ ಕೃಷಿಕರು ಕೋವಿಯನ್ನು ಠಾಣೆಯಲ್ಲಿ ಠೇವಣಿ ಇಡುವ ನಿಯಮವನ್ನು ಜಿಲ್ಲಾಡಳಿತದ ಸೂಚನೆಯಂತೆ ಪೊಲೀಸ್ ಇಲಾಖೆ ಪ್ರತೀ ವರ್ಷ ನಡೆಸುತ್ತಿತ್ತು. ಆದರೆ ಈ ಬಾರಿ ಕೋವಿಯನ್ನು ಠಾಣೆಗಳಲ್ಲಿ ಠೇವಣಿ ಇರಿಸಿದರೆ, ಕೃಷಿಗೆ ಕಾಡುಹಂದಿ ಹಾಗೂ ಮಂಗಗಳ ಉಪಟಳ ಎದುರಾದರೆ ಏನು ಗತಿ ಎಂದು ಮರುಪ್ರಶ್ನಸಿದ್ದು ಈ ಹಿನ್ನೆಲೆಯಲ್ಲಿ ಕೆಲ ಕೃಷಿಕರಿಗೆ ವಿನಾಯಿತಿಯೂ ದೊರೆತ್ತಿತ್ತು. ಜಿಲ್ಲಾಧಿಕಾರಿಗೆ ರಿಯಾಯಿತಿ ನೀಡುವಂತೆ ಪತ್ರ ಬರೆದು ಕೋವಿಯ ಅಗತ್ಯತೆ ಬಗ್ಗೆ ತಿಳಿಸಿದ್ದರು. ಆದರೆ ಪೊಲೀಸರು ದೂರವಾಣಿಯ ಕಿರುಕುಳ ತಾಳಲಾರದೆ ತಮ್ಮ ಕೋವಿಯನ್ನ ವಿಟ್ಲ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಿದ್ದರು. ಜಿಲ್ಲಾಧಿಕಾರಿಗಳು ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಈ ಕುರಿತಾಗಿ ಎ.೧ ರಂದು ಉಚ್ಚ ನ್ಯಾಯಾಲಯಕ್ಕೆ ಮಾಣಿಮೂಲೆ ಗೋವಿಂದ ಭಟ್ ಜತೆಗೆ ವಕೀಲ ಸುಬ್ರಹ್ಮಣ್ಯ ಭಟ್ ಮೂಲಕ ಮನವಿ ಸಲ್ಲಿಸಿದ್ದರು. ಇದಾಗುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯ ಮರುಪರಿಶೀಲನೆಯನ್ನು ನಡೆಸಿ ಕೋವಿ ಠೇವಣಿಗೆ ವಿನಾಯಿತಿ ನೀಡುವ ಬಗ್ಗೆ ತಿಳಿಸಿದ್ದರು. ಹೀಗಿದ್ದರೂ ಕೋವಿಯನ್ನು ಹಿಂತಿರುಗಿಸದೆ, ನ್ಯಾಯಾಲಯದ ಆದೇಶವನ್ನು ಇಲಾಖೆ ಪಾಲಿಸಿರಲಿಲ್ಲ.

ಎ.೯ರಂದು, ತಮ್ಮ ತೋಟಕ್ಕೆ ಕೋತಿಗಳ ಹಿಂಡು ಬಂದು ಕೃಷಿಯನ್ನು ಹಾನಿ ಮಾಡುತ್ತಿವೆ ನನ್ನ ಬಳಿ ಈಗ ಕೋವಿ ಇಲ್ಲ. ತೋಟಕ್ಕೆ ಬಂದ ಕೋತಿಗಳನ್ನು ಓಡಿಸಿ ಎಂದು ೧೧೨ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದರು. ಅದರಂತೆ ವಿಟ್ಲ ಪರಿಸರದ ೧೧೨ ವಾಹನ ಬಿಲ್ಲಂಪದವುಗೆ ಬಂದು ಸಮಸ್ಯೆಗೆ ಸ್ಪಂದಿಸಿದ್ದರು. ಕೋವಿ ನೀಡದೇ ಹೋದರೆ ಪದೇ ಪದೇ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತ ಪೊಲೀಸರು ಮರುದಿನವೇ ಕೋವಿಯನ್ನು ನಿಶಾಂತ್ ಬಿಲ್ಲಂಪದವು ಅವರ ಮನೆಗೆ ಹಿಂತಿರುಗಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಕಾರಣದಿಂದ ತೋಟಕ್ಕೆ ನುಗಿದ್ದ ಕೋತಿಯನ್ನು ಓಡಿಸಲು ೧೧೨ ತುರ್ತು ಪೊಲೀಸರನ್ನೇ ತೋಟಕ್ಕೆ ಕರೆಸಿದ ಘಟನೆ, ಪೊಲೀಸರ ಜೊತೆ ನಿಶಾಂತ್ ಬಿಲ್ಲಂಪದವು ನಡೆಸಿದ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ