ವಿವೇಕಾನಂದ ಕಾಲೇಜ್‌ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ

KannadaprabhaNewsNetwork | Published : Mar 29, 2025 12:35 AM

ಸಾರಾಂಶ

ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ರಾಷ್ಟ್ರದ ಸ್ಥಾನಮಾನ ಅನಾವರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ: ಕ್ಯಾಪ್ಟನ್ ಬ್ರಿಜೇಶ್ ಚೌಟ

ಕನ್ನಡಪ್ರಭವಾರ್ತೆ ಪುತ್ತೂರು

ರಾಷ್ಟ್ರದ ಸ್ಥಾನಮಾನ ಅನಾವರಣವಾಗಬೇಕಾದರೆ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿರುತ್ತದೆ. ಭಾರತಕ್ಕೆ ಒಂದು ಸಾಂಸ್ಕೃತಿಕ ಪರಂಪರೆ ಇದೆ, ದೇಶವು ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇಂತಹ ಸಂದರ್ಭದಲ್ಲಿ ಯುವಜನತೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು ಕೀಳರಿಮೆಯ ಮಾನಸಿಕತೆಯನ್ನು ಬಿಟ್ಟು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು, ಹಾಗಿದ್ದಾಗ ಮಾತ್ರ ಗೆಲುವು ಸಾಧ್ಯ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಅವರು ಶನಿವಾರ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸಂಭ್ರಮಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿಶ್ವದಲ್ಲಿ ಭಾರತ ನಾಯಕತ್ವವನ್ನು ಪಡೆಯಬೇಕಾದರೆ ಯುವ ಜನರು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ರಾಷ್ಟ್ರದ ಸಂಪತ್ತು ಅವರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಹೆಜ್ಜೆಯನ್ನು ಮುಂದಿಟ್ಟರೆ, ವಿಶ್ವದ ಯಾವುದೇ ಶಕ್ತಿಗೆ ಭಾರತವನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದ ನಾವು ಬೆಳೆಯುತ್ತೇವೆ ಮತ್ತು ನಮ್ಮ ರಾಷ್ಟ್ರವು ಬೆಳೆಯುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ರಾಷ್ಟ್ರದ ಹಿತ ಚಿಂತನೆಯ ಪರಿಕಲ್ಪನೆಯನ್ನು ಇಟ್ಟುಕೊಂಡು ವಿವೇಕಾನಂದ ವಿದ್ಯಾಸಂಸ್ಥೆಯು ಪ್ರಾರಂಭವಾಯಿತು. ರಾಷ್ಟ್ರದ ಚಿಂತನೆಗೆ ಧೋರಣೆಯಾದಾಗ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧ ದೇಶಕ್ಕಾಗಿ ಹೋರಾಡಿದ ಸಂಸ್ಥೆ ನಮ್ಮದು. ಧರ್ಮ ಸಂಸ್ಕೃತಿ ಜೀವನ ಮೌಲ್ಯಗಳು ಇಟ್ಟುಕೊಂಡು ಇಲ್ಲಿಯ ವಿದ್ಯಾರ್ಥಿಗಳು ರಾಷ್ಟ್ರೀಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಮಾಜದ ಚಿಂತನೆ, ಸೇವೆಯ ಮನೋಭಾವ ಬೆಳೆಸಲು ಈ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತದೆ ಎಂದರು.ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ ಪುತ್ತೂರಿನ ಜನತೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಾರಂಭಿಸಿದ ಸಂಸ್ಥೆ ಇದಾಗಿದ್ದು, ಅಂದಿನ ಹಿರಿಯರು ತಮ್ಮ ಸಂಪತ್ತು ಮತ್ತು ಶ್ರಮವನ್ನು ಈ ವಿದ್ಯಾಲಯಕ್ಕಾಗಿ ನೀಡಿದ್ದಾರೆ. ಹಲವಾರು ಜನರ ನಿಸ್ವಾರ್ಥ ಸೇವೆಯಿಂದ ನಮ್ಮ ಸಂಸ್ಥೆಯಿಂದು ಬೆಳೆದು ನಿಂತಿದೆ ಎಂದರು.ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿಭಾಗದ ವಿವೇಕ ಸ್ಮೃತಿ'''''''''''''''''''''''''''''''' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಗೌರಿ ಪೈ( ವೈದ್ಯಕೀಯ ಮತ್ತು ಸಮಾಜ ಸೇವೆ ), ಎಂ ರಾಮ ಮೋಹನ್ ರಾವ್ ( ಕಾನೂನು), ಡಾ. ಮೋಹನ್ ಕುಮಾರ್ ವೈ (ಸಾಮಾಜಿಕ ಹೋರಾಟ ), ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ (ಶಿಕ್ಷಣ ಕ್ಷೇತ್ರ), ಸತ್ಯಶಂಕರ್ ( ಉದ್ಯಮ ಮತ್ತು ವ್ಯವಹಾರ ), ವೇ. ಮೂ. ಕಶೆಕೊಡಿ ಸೂರ್ಯನಾರಾಯಣ ( ಧಾರ್ಮಿಕ ಮತ್ತು ಸಮಾಜ ಸೇವೆ), ಡಾ. ರವೀಶ್ ಪಡುಮಲೆ( ಜನಪದ), ದೇವಿ ಪ್ರಸಾದ್ ಕಡಮಜೆ ( ಕೃಷಿ), ಪಿ. ಜಿ.ಎಸ್.ಎನ್.ಪ್ರಸಾದ್ ( ಮಳೆ ದಾಖಲೀಕರಣ ), ಗೋವಿಂದ ನಾಯಕ್ ಪಾಲೆಚ್ಚಾರು ( ಯಕ್ಷಗಾನ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ ಕೃಷ್ಣ ಭಟ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಮತ್ತು ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ್ ಎಚ್. ಜಿ ಮತ್ತು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಬಲಿಕ ಮೈಸೂರಿನ ಸರಗೂರು ವಿವೇಕಾನಂದ ಆಸ್ಪತ್ರೆಯ ಮೂಳೆಶಸ್ತ್ರ ಚಿಕಿತ್ಸಾ ತಜ್ಞ ಹಾಗೂ ಸ್ವಾಮಿ ವಿವೇಕಾನಂದ ಯುವಜನ ವಿಭಾಗದ ಮಾರ್ಗದರ್ಶಕ ಡಾ. ಸೀತಾರಾಮ್ ಎಂ.ಆರ್ `ಭಾರತೀಯ ಶ್ರೀಮಂತ ಜ್ಞಾನ ಸಂಪತ್ತಿನ ಅನಾವರಣ: ಶಿಕ್ಷಣದ ಕುರಿತು ಹೊಸ ದೃಷ್ಟಿಕೋನ'' ಎಂಬ ವಿಷಯದ ಕುರಿತು ವಿಚಾರಗೋಷ್ಠಿಯನ್ನು ನಡೆಸಿಕೊಟ್ಟರು.ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಪ್ರೊ. ಲಕ್ಷ್ಮಿ ಭಟ್ ನಿರೂಪಿಸಿದರು.

Share this article