ವಿವೇಕಾನಂದರು ಯುವಕರಿಗೆ ಪ್ರೇರಣೆ: ವೀರೇಶಾನಂದ ಸ್ವಾಮೀಜಿ

KannadaprabhaNewsNetwork | Published : Jan 13, 2024 1:32 AM

ಸಾರಾಂಶ

ತುಮಕೂರು ವಿವಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ ಆಚರಣೆ

ಕನ್ನಡಪ್ರಭ ವಾರ್ತೆ ತುಮಕೂರು

ಮಲಗಿದ್ದ ಭಾರತವನ್ನು ಬಡಿದೆಬ್ಬಿಸಲು, ವಿವೇಕ-ವಿವೇಚನೆಯನ್ನು ಕಲಿಸಲು, ತ್ಯಾಗದ ಮೌಲ್ಯವನ್ನು ಎತ್ತಿತೋರಿಸಲು, ಯುವಶಕ್ತಿಯನ್ನು ಪ್ರಯತ್ನಶೀಲರನ್ನಾಗಿಸಲು ವಿವೇಕಾನಂದರು ಪ್ರೇರೇಪಿಸಿದರು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ತುಮಕೂರು ವಿವಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಶಕ್ತಿಗೆ ತಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಛಲವಿರಬೇಕು. ಯುವಕರಿಗೆ ವರವೆಂದರೆ ಬೇಗನೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ. ಶಾಪವೆಂದರೆ ಒಳ್ಳೆಯ ವಿಚಾರಗಳಿಗೆ ಕಿವಿ ಮುಚ್ಚಿ ಕೂರುವುದು. ಯುವಕರು ಭವಿಷ್ಯ ಭಾರತದ ಮಾನವ ಸಂಪನ್ಮೂಲವಾಗಬೇಕು. ಜೀವನಾನುಭವಗಳನ್ನು ಪುಸ್ತಕದಲ್ಲಿ ಬರೆದಿಟ್ಟಾಗ ನಿಮ್ಮ ಬದುಕಿಗೆ ನೀವೇ ಸ್ಪೂರ್ತಿಯಾಗುತ್ತೀರಿ ಎಂದರು.

ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯುವ ನೈತಿಕ ಶಕ್ತಿಯನ್ನು, ಮೌಲ್ಯವನ್ನು ಕಲಿಸಿದಾಗ ಮಾನವ ಮಿತ್ರರಾಗಬಹುದು. ವಿವೇಕಾನಂದರು ಹೇಳುವ ಹಾಗೆ, ‘ಆತ್ಮಶಕ್ತಿ, ಆತ್ಮವಿಶ್ವಾಸ, ಆತ್ಮಗೌರವ, ಸ್ವಾಭಿಮಾನ, ಸ್ವಾವಲಂಬನೆ, ವ್ಯಕ್ತಿತ್ವ ಶಕ್ತಿಯನ್ನು ಬೆಳೆಸಿಕೊಂಡ ಯುವಕ ಯಾವ ದುಷ್ಟ ಶಕ್ತಿಗೂ ಎದೆಗುಂದಲಾರ’. ವಿವೇಕಾನಂದರು ಕೊಟ್ಟ ರಾಷ್ಟ್ರೀಯತೆಯು ಉತ್ಕೃಷ್ಟವಾದ ಅಂತಾರಾಷ್ಟ್ರೀಯತೆಯಾಯಿತು ಎಂದು ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್‌ ಜಮ್‌ ಮಾತನಾಡಿ, ತನ್ನನ್ನು ತಾನು ದುರ್ಬಲ ಎಂದು ಕೊಳ್ಳಬಾರದು. ಸೋಲಿಗೆ ಅಂಜಬಾರದು. ಯುವಶಕ್ತಿಯ ನಡೆ ಆದರ್ಶಗಳ ಕಡೆಗಿರಬೇಕು. ಏಕಾಗ್ರತೆಯೊಂದಿದ್ದರೆ ಮಾಡುವ ಕಾರ್ಯಾದಲ್ಲಿ ಯಶಸ್ಸು ನಮ್ಮದಾಗುತ್ತದೆ. ಸಿಂಹದಂತ ಗಾಂಭೀರ್ಯವಿರಬೇಕು. ಗುರಿ ಮುಟ್ಟುವ ಹಸಿವಿರಬೇಕು. ಶಕ್ತಿಯೇ ಬದುಕು, ದುರ್ಬಲತೆಯೇ ಸಾವು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ 161 ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿವಿ ಸ್ನಾತಕ, ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ‘ಸದೃಢ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ - ಸ್ವಾಮಿ ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ’ ಕುರಿತ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಿಲಾಗಿತ್ತು.

ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ. ಚೇತನ್ ಪ್ರತಾಪ್ ಕೆ.ಎನ್. ಉಪಸ್ಥಿತರಿದ್ದರು.

Share this article