ವಿವೇಕಾನಂದರು ಜ್ಞಾನದ ಸಂಕೇತ: ತಿಪ್ಪೇಸ್ವಾಮಿ

KannadaprabhaNewsNetwork | Published : Jan 15, 2024 1:49 AM

ಸಾರಾಂಶ

ಮೇಲು-ಕೀಳು, ಜಾತಿ-ಭೇದ, ಅಸ್ಪೃಶ್ಯತೆ ರಹಿತ, ಅಭಿವೃದ್ಧಿ ಹೊಂದಿದ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಏಳಿ ಎದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರು ಯುವಕರಿಗೆ ಕರೆ ನೀಡಿದ್ದಾರೆ.

ಹಿರಿಯೂರು: ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಓದುವುದರಿಂದಲೇ ಭಾರತದ ಚರಿತ್ರೆ ಅರ್ಥೈಸಿಕೊಳ್ಳಲು ಸಾಧ್ಯ ಎಂದು ರವೀಂದ್ರನಾಥ್ ಟ್ಯಾಗೋರ್ ಹೇಳಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ನಗರದ ಗಾಂಧಿ ವೃತ್ತದ ಸಮೀಪವಿರುವ ಎಎಂಎಸ್ ಕಂಪ್ಯೂಟರ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇಲು-ಕೀಳು, ಜಾತಿ-ಭೇದ, ಅಸ್ಪೃಶ್ಯತೆ ರಹಿತ, ಅಭಿವೃದ್ಧಿ ಹೊಂದಿದ ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ಏಳಿ ಎದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಸ್ವಾಮಿ ವಿವೇಕಾನಂದರು ಯುವಕರಿಗೆ ಕರೆ ನೀಡಿದ್ದಾರೆ. ಯಾವುದೇ ಒಂದು ವರ್ಗದ ಶ್ರೇಷ್ಠತೆ ಸಮಾಜದ ಸಮಾನತೆ ಹಾಳುಮಾಡುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿಕೋನವಾಗಿತ್ತು.

ಭಾರತ ಸಾಂಸ್ಕೃತಿಕವಾಗಿ ಪುನರುಜ್ಜೀವನಗೊಳ್ಳಬೇಕೆಂದರೆ ಯುವಕರಿಂದ ಮಾತ್ರ ಸಾಧ್ಯ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನವಾದ್ದರಿಂದ ನೈತಿಕತೆಯುಳ್ಳ, ಪರಿಶ್ರಮಯುತವಾದ ಜೀವನ ಯುವಕರು ಮೈಗೂಡಿಸಿಕೊಳ್ಳಬೇಕು. ಭಾರತದ ಹೊರಗಡೆ ಶ್ರೇಷ್ಠತೆ, ಆಧ್ಯಾತ್ಮಿಕ ಪರಂಪರೆಯ ಭಾಷಣ ಮಾಡುತ್ತಿದ್ದ ನರೇಂದ್ರರು ಭಾರತದ ಒಳಗಡೆ ಸಾಮಾಜಿಕ ಪಿಡುಗುಗಳಾದ ಜಾತಿ ವ್ಯವಸ್ಥೆ, ಬಡತನದಂತಹವುಗಳ ಹೋಗಲಾಡಿಸುವಿಕೆ ಬಯಸಿದ್ದರು. ವಿಜ್ಞಾನ ಕೈಗಾರಿಕೆಗಳ ಉತ್ತೇಜಿಸುವಿಕೆ ವಸಾಹತು ಶಾಹಿಗಳ ಕೊನೆಗೊಳಿಸುವ ಬಗ್ಗೆ ಪ್ರಚಾರ ಮಾಡುತ್ತಾ ಧಾರ್ಮಿಕ ರಂಗದಲ್ಲಿ ನವ ಸುಧಾರಣೆ ಆಶಯ ಹೊಂದಿದ್ದರು ಎಂದರು.

ವಾಣಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಧರಣೇಂದ್ರಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಮಹತ್ವ ಜಗತ್ತಿಗೆ ಪರಿಚಯಿಸಿದ ವಿವೇಕಾನಂದರು ತತ್ವಾದರ್ಶಗಳನ್ನು ಹೊಂದಿರುವ ದಿವ್ಯ ಶಕ್ತಿಯಾಗಿದ್ದರು ಜ್ಞಾನದ ಸಂಕೇತವಾಗಿದ್ದರು. ಭಾರತ ಜ್ಞಾನದ ಮೂಲಕ ಪ್ರಬಲ ರಾಷ್ಟ್ರಗಳನ್ನು ಅಳುತ್ತಿರುವ ದೇಶವಾಗಿದೆ. ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಇಡಿ ಕಾಲೇಜು ಉಪನ್ಯಾಸಕ ಶಾಂತ ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ, ಜೀವಧಾತೆ ಪೌಂಡೇಶನ್ ಮುಖ್ಯಸ್ಥ ಅಭಿನಂದನ್, ಮಹಿಳಾ ಪೊಲೀಸ್ ಪೇದೆ ರೇಖಾ, ಯಲ್ಲದಕೆರೆ ಉಪನ್ಯಾಸಕ ರಾಮಲಿಂಗಾ, ಎಬಿವಿಪಿ ಸಂಘಟನೆ ಯೋಗೇಶ್, ವಿದ್ಯಾಸಂಸ್ಥೆ ಮುಖ್ಯಸ್ಥ ಮುರಳೀಧರ್, ಕಿರಣ್ ಮಿರಜ್ಕರ್, ಉಪನ್ಯಾಸಕರಾದ ಎಲ್.ಶಾಂತಕುಮಾರ್, ಪ್ರಕಾಶ್, ಮಂಜು, ಗೋವಿಂದರಾಜು ಮುಂತಾದವರು ಹಾಜರಿದ್ದರು.

Share this article