ಕನ್ನಡಪ್ರಭ ವಾರ್ತೆ: ಯುವಕರ ಸ್ವಾವಲಂಬಿ ಬದುಕಿಗೆ ವೃತ್ತಿಪರ ತರಬೇತಿ ಅವಶ್ಯವಾಗಿದ್ದು, ಇಂದಿನ ತ್ವರಿತ-ಬದಲಾಗುತ್ತಿರುವ ಆರ್ಥಿಕ ಸನ್ನಿವೇಶದಲ್ಲಿ ಮುಂದಿನ ಪೀಳಿಗೆಗೆ ನಿರ್ದಿಷ್ಟ ವಿಶೇಷ ಕೌಶಲ್ಯಗಳನ್ನು ಒದಗಿಸುವುದು ಅತ್ಯಗತ್ಯ ಎಂದು ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್.ಎಸ್.ರಮೇಶ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರೇರೂಗಿ ಯುಬಿಎಸ್ ಶಾಲಾ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ವೃತ್ತಿಪರ ತರಬೇತಿಯು ಯುವ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸಿದ್ಧರಾಗಲು ಸಹಕರಿಸಿ, ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗುತ್ತದೆ. ದೇಶದ ಆರ್ಥಿಕ ಬೆಳವಣಿಗೆಗೆ ಧನಾತ್ಮಕವಾಗಿ ಕೊಡುಗೆ ನೀಡುವತ್ತ ಯುವಸಮೂಹ ಗಮನಹರಿಸಬೇಕು ಎಂದು ಸಲಹೆ ನೀಡಿದರು.ತರಬೇತಿ ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಪಿ.ವೈ.ರಜನೀಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟಿಕೋತ್ಸವ ಎನ್ನುವುದು ಸಂಭ್ರಮಾಚರಣೆಯಲ್ಲ. ಬದುಕು ರೂಪಿಸುವ ಕಾಲ. ನಿಮ್ಮ ಮೇಲೆ ಪೋಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆ ಹುಸಿಯಾಗದ ಹಾಗೆ ಓದಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.
2022-24ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಿಸಲಾಯಿತು.ಸಂಸ್ಥೆಯ ಉಪನ್ಯಾಸಕರಾದ ಗಂಗಾಧರ ಭಾಗೆಳ್ಳಿ, ರಮೇಶ ಮೇತ್ರಿ, ಸಂತೋಷ ಜಾಧವ, ಪ್ರೇಮಾನಂದ ದೇಸಾಯಿ, ರವಿ ಹಾದಿಮನಿ, ಅಬ್ದುಲ್ಲಾ, ರೇಷ್ಮಾ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.