ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣವನ್ನು ತೆಗಳುತ್ತಿದ್ದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಈಗ ತಮ್ಮ ಕುಟುಂಬದವರನ್ನೇ ರಾಜಕೀಯವಾಗಿ ಬೆಳೆಸುತ್ತಿರುವುದು ಎಷ್ಟು ಸರಿ ಎಂದು ಛಲವಾದಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಹಂಸರಾಜು ಪ್ರಶ್ನಿಸಿದ್ದಾರೆ. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ರಾಜಕೀಯ ನಿವೃತ್ತಿ ನಂತರ ನನ್ನ ಕುಟುಂಬದವರನ್ನು ರಾಜಕೀಯವಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿ ಈಗ ತನ್ನ ಅಳಿಯಂದಿರಬ್ಬರನ್ನು ರಾಜಕೀಯವಾಗಿ ಪ್ರೋತ್ಸಾಹಿಸಿ, ಈ ಚುನಾವಣೆಗೆ ನನ್ನ ಅಳಿಯಂದಿರಿಬ್ಬರು ಆಕಾಂಕ್ಷಿಗಳು ಯಾರಿಗೆ ಟಕೇಟ್ ನೀಡಿದರೂ ಹೊಂದಾಣಿಕೆಯಿಂದ ಇರುತ್ತಾರೆ ಎಂದು ಹೇಳಿಕೆ ನೀಡಿರುವುದು ಇವರ ಸ್ವಹಿತಾಶಕ್ತಿಯನ್ನು ತೋರಿಸುತ್ತದೆ ಎಂದು ಆರೋಪಿಸಿದರು. ರಾಜ್ಯದ ಪ್ರತಿಷ್ಠಿತ ಮೀಸಲು ಕ್ಷೇತ್ರ ಚಾಮರಾಜನಗರ ೨೦೧೯-೨೦೨೪ , ಯಾವುದೇ ಸಾರ್ವಜನಿಕ ಅಭಿವೃದ್ಧಿಯನ್ನು ಕಾಣದಂತಾಗಿದೆ. ಇಂತಹವರ ಮಾತು ಕೇಳಿ ಏನಾದರೂ ಬಿಜೆಪಿ ವರಿಷ್ಠರು ಅವರ ಕುಟುಂಬದವರಿಗೆ ಟಕೆಟ್ ನೀಡಿದರೆ ಸೋಲು ಕಟ್ಟಿಟ್ಟ ಬುತ್ತಿ, ಆ ಅಭ್ಯರ್ಥಿ ಠೇವಣಿಯನ್ನು ಕಳೆದುಕೊಳ್ಳುತ್ತಾರೆ, ಈ ಬಗ್ಗೆ ಬಿಜೆಪಿಯ ದಿಲ್ಲಿ ನಾಯಕರು ಗಂಭೀರ ಚಿಂತನೆ ನಡೆಸಿ, ಜನಸೇವೆ ಮಾಡಲು ಹೊರಟಿರುವ ಕೇತ್ರದ ಬಗ್ಗೆ ತನ್ನದೇ ಆದ ಚಿಂತನೆ ನಡೆಸಿರುವ ಸ್ಥಳೀಯರಾದ ಕೆ. ಶಿವರಾಂ ಅವರಿಗೆ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು.ಕಳೆದ ಬಾರಿಯೇ ಕೆ. ಶಿವರಾಂ ಅವರಿಗೆ ಟಿಕೇಟ್ ಸಿಗಬೇಕಾಗಿತ್ತು. ಕೊನೆಗಳಿಯವರೆಗೂ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕೊನೆಯಲ್ಲಿ ನಾನೇ ಅಭ್ಯರ್ಥಿ ಎಂದು ಹೇಳಿದರು, ಆಗ ಕೆ. ಶಿವರಾಂ ಗೌರವದಿಂದ ಬಿಟ್ಟುಕೊಟ್ಟು ಅವರ ಗೆಲುವಿಗೆ ಶ್ರಮಿಸಿದ್ದರು, ಈ ಬಾರಿ ಕೆ.ಶಿವರಾಂ ಅವರನ್ನು ಬೆಂಬಲಿಸಬೇಕಿತ್ತು, ಅದನ್ನು ಬಿಟ್ಟು ತಮ್ಮ ಅಳಿಯಂದಿರನ್ನು ಬೆಂಬಲಿಸಿರುವುದು ಇವರ ಸ್ವಾರ್ಥತೆಯನ್ನು ತೋರುತ್ತದೆ ಎಂದರು.ರಾಜಕೀಯದ ಗಂಧಗಾಳಿಯನ್ನೇ ಅರಿಯದ, ಪ್ರಸಾದ್ ಅವರ ಕಿರಿ ಅಳಿಯ ಡಾ.ಮೋಹನ್ ಕುಮಾರ್ ಬಿಜೆಪಿ ಸಂಭವನೀಯ ಅಭ್ಯರ್ಥಿ ಎಂದು, ಕ್ಷೇತ್ರದೆಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿರೋದು ನಿಜಕ್ಕೂ ಹಾಸ್ಯಾಸ್ಪದ. ಕ್ಷೇತ್ರದ ಜನರ ಜೊತೆಯಲ್ಲಿ ನಿಕಟ ಸಂಪರ್ಕಹೊಂದಿ ಜನರೊಡನೆ ಬೆರೆತಿರುವ ಕೆ. ಶಿವರಾಂ ಅವರಿಗೆ ಬಿಜೆಪಿ ಟಿಕೇಟ್ ನೀಡಿದರೆ ಗೆಲುವು ಸಾಧ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಜೆ. ನಿಂಗರಾಜು, ರಾಜಪ್ಪ,. ಬಸವಣ್ಣ, ಅಭಿನಾಗಭೂಷಣ್, ರಾಜೇಂದ್ರ, ಶಿವಲಿಂಗು, ವೆಂಕಟೇಶ್ ಇದ್ದರು.