ಶಿಗ್ಗಾಂವಿ: ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಹಿಂದೂ ಸಂಘಟನೆಗಳು ನೀಡಿದ ಸ್ವಯಂಪ್ರೇರಿತ ಬಂದ್ ಕರೆಗೆ ಶಿಗ್ಗಾಂವಿ ವರ್ತಕರು ಹಾಗೂ ಸಾರ್ವಜನಿಕರು ಸ್ಪಂದಿಸಿದ್ದಾರೆ. ಬುಧವಾರ ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು, ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನಸಂಚಾರವೂ ವಿರಳವಾಗಿತ್ತು.
ವಿಶೇಷವಾಗಿ ಮಾರುತಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೇಷಲ್ ಆ್ಯಕ್ಷನ್ ಫೋರ್ಸ್ (ಎಸ್‌ಎಎಫ್), ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಸ್ಥಾನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನೇರವಾಗಿ ನಿಗಾ ವಹಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರು ಸಂಚರಿಸುತ್ತಿದ್ದು, ಗುಂಪು ಸೇರುವಿಕೆ, ಘರ್ಷಣೆ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಯಾವುದೇ ಬೆಳವಣಿಗೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಿದ್ದಾರೆ.ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನಾಗರಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಮಾಹಿತಿ ಅಥವಾ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಸೂಚಿಸಲಾಗಿದೆ.
ಈಗಾಗಲೇ ನಾವು ಕ್ರಮ ತಗೊಂಡಿದ್ದೇವೆ, ಆರೋಪಿ ಅರೆಸ್ಟ್ ಆಗಿದ್ದಾನೆ. ಈದ್ ಮಿಲಾದ್ ಹಬ್ಬದ ದಿನ ಬಂದ್ ಬೇಡ ಎಂದು ಹೇಳಿದ್ದೇವು, ನಾವು ವ್ಯಾಪಾರಸ್ಥರಿಗೆ ಅಂಗಡಿ ತಗೀರಿ ಅಂತನೂ ಹೇಳಿಲ್ಲ, ಬಂದ್ ಮಾಡಿ ಅಂತನೂ ಹೇಳಿಲ್ಲ, ವ್ಯಾಪಾರಸ್ಥರಿಗೆ ಅಂಗಡಿ ತೆಗೆಯುವಂತೆ ಒತ್ತಡ ಹೇರಲಾಗಿದೆ ಅನ್ನೋದು ಸರಿ ಅಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಹೇಳಿದರು.