ಸ್ವಯಂ ಪ್ರೇರಿತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳಿ

KannadaprabhaNewsNetwork | Published : Mar 17, 2025 12:32 AM

ಸಾರಾಂಶ

ಆಧುನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಮುನ್ನಡೆ ಸಾಧಿಸಿದರೂ ರಕ್ತ ಕಣಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯಲಾಗಿಲ್ಲ. ಮಾನವನಿಂದ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಬಹುದು ಎಂದು ವಿವೇಕ ಜಾಗೃತ ಬಳಗದ ಅಧ್ಯಕ್ಷ ರಾಜೀವ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆಧುನಿಕ ಯುಗದಲ್ಲಿ ವೈದ್ಯಕೀಯ ಕ್ಷೇತ್ರ ಎಷ್ಟೇ ಮುನ್ನಡೆ ಸಾಧಿಸಿದರೂ ರಕ್ತ ಕಣಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯಲಾಗಿಲ್ಲ. ಮಾನವನಿಂದ ಮಾತ್ರ ಇನ್ನೊಬ್ಬ ಮಾನವನಿಗೆ ರಕ್ತವನ್ನು ದಾನ ಮಾಡಿ ಪ್ರಾಣ ಉಳಿಸಬಹುದು ಎಂದು ವಿವೇಕ ಜಾಗೃತ ಬಳಗದ ಅಧ್ಯಕ್ಷ ರಾಜೀವ್ ಹೇಳಿದರು.

ನಗರದ ತ್ರಿಮೂರ್ತಿ ದೇವಾಲಯದ ಸಭಾಂಗಣದಲ್ಲಿ ಪರಮಪೂಜ್ಯ ಡಾ. ಎ.ಚಂದ್ರಶೇಖರ್ ಉಡುಪ 75ನೇ ಜನ್ಮದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನವು ಇಬ್ಬೊಬ್ಬರ ಜೀವ ಉಳಿಸುವ ಜೊತೆಗೆ ರಕ್ತದಾನಿಯ ಶರೀರಕ್ಕೆ ಆರೋಗ್ಯ ದೊರಕಲಿದೆ. ಕನಿಷ್ಟ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ಮನುಷ್ಯ ರಕ್ತದಾನ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವುದನ್ನು ತಪ್ಪಿಸಿ, ಆರೋಗ್ಯಪೂರ್ಣ ಬದುಕು ಗಳಿಸಬಹುದು ಎಂದರು.

ಅಪಘಾತ, ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಸಮಯಕ್ಕೆ ರಕ್ತ ಸಿಗದಿರುವ ಕಾರಣ ಹಲವಾರು ಮಂದಿ ಸಾವಪ್ಪಿದ್ದಾರೆ. ಆ ನಿಟ್ಟಿನಲ್ಲಿ ಯುವ ಸಮೂಹ ಪ್ರಾಣದ ಮಹತ್ವವನ್ನು ಅರಿಯಬೇಕು. ಸಾವಿನಂಚಿನಲ್ಲಿ ಪ್ರಾಣ ಉಳಿಸಲು ಸ್ವಯಂಪ್ರೇರಿತರಾಗಿ ಮುಂದಾಗಿ ಮಾನವೀಯ ಧರ್ಮ ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.ರಕ್ತದಾನದಿಂದ ಹೊಸ ಕೆಂಪು ರಕ್ತಕಣಗಳು ಉತ್ಪತ್ತಿಯಾಗಿ ದೇಹವು ಹೊಸ ರಕ್ತವನ್ನು ಉತ್ಪಾದಿಸುತ್ತದೆ. ದೇಹದ ಅಂಗಾಂಗಗಳಲ್ಲಿ ಅನಾವಶ್ಯಕ ಕೊಬ್ಬಿನಾಂಶ ಕ್ರೂಢೀಕರಣ ಆಗುವುದನ್ನು ತಪ್ಪಿಸುವ ಜೊತೆಗೆ ಶರೀರದಲ್ಲಿ ಹೆಚ್ಚುವರಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ ಹಾಗೂ ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.ಉಡುಪಿಯ ಸಾಲಿಗ್ರಾಮದಲ್ಲಿರುವ ಡಾ. ಎ.ಚಂದ್ರಶೇಖರ್ ಉಡುಪುರವರು ಮಹಿಳಾ ಸಬಲೀಕರಣಕ್ಕೆ ವನಿತಾಶ್ರೀ, ಯುವಕರ ಕೌಶಲಾಭಿವೃದ್ದಿಗೆ ಯುವಕಶ್ರೀ, ವ್ಯಕ್ತಿತ್ವ ವಿಕಸನ ನಿರ್ಮಾಣಕ್ಕೆ ಪೂರಕ ಯೋಜನೆ ಹಾಗೂ ರಕ್ತದಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಶಿಬಿರದ ಉಸ್ತುವಾರಿ ಎಚ್.ಜಿ.ಶೇಖರ್ ಮಾತನಾಡಿ, ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡುವವರು, ಮಹಿಳೆಯರ ಋತುಸ್ರಾವದ ಸಮಯ ಮತ್ತು ಹೆರಿಗೆಯ ನಂತರ 6 ತಿಂಗಳು ರಕ್ತದಾನ ಮಾಡಬಾರದು ಹಾಗೂ ಯಾವುದೇ ವ್ಯಕ್ತಿ ಅನಾರೋಗ್ಯವಿದ್ದಾಗ ರಕ್ತದಾನಕ್ಕೆ ಮುಂದಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.ಇದೇ ವೇಳೆ ರಕ್ತದಾನ ಶಿಬಿರದಲ್ಲಿ ಹಲವು ಮಂದಿ ಭಾಗವಹಿಸಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಟಿ-ಶರ್ಟ್ಸ್, ಪಾನೀಯ ಹಾಗೂ ಹಣ್ಣನ್ನು ವಿತರಿಸಲಾಯಿತು. ಶಿಬಿರದಲ್ಲಿ ವಿವೇಕ ಜಾಗೃತ ಬಳಗದ ಖಜಾಂಚಿ ಪ್ರವೀಣ್, ಹಿರಿಯರಾದ ನಂಜುಂಡಪ್ಪ, ಸಿದ್ದಯ್ಯ, ಡಾ. ಅನೀತ್‌ಕುಮಾರ್ ಉಪಸ್ಥಿತರಿದ್ದರು.

Share this article