ವಾಂತಿಬೇಧಿ ಪ್ರಕರಣ: ಅಸ್ವಸ್ಥರ ಸಂಖ್ಯೆ 57ಕ್ಕೆ ಏರಿಕೆ

KannadaprabhaNewsNetwork |  
Published : Jul 21, 2024, 01:22 AM IST
ಸುರಪುರ ತಾಲೂಕಿನ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಯುವ ನಾಯಕ ಹಣಮಂತ ನಾಯಕ (ಬಬ್ಲೂಗೌಡ) ಭೇಟಿ ನೀಡಿ ಜನತೆಯ ಆರೋಗ್ಯ ವಿಚಾರಿಸಿದರು.  | Kannada Prabha

ಸಾರಾಂಶ

ಸುರಪುರ ತಾಲೂಕಿನ ಕೆಂಭಾವಿ ಸಮೀಪ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಬಿಜೆಪಿ ಯುವ ನಾಯಕ ಹಣಮಂತ ನಾಯಕ (ಬಬ್ಲೂಗೌಡ) ಭೇಟಿ ನೀಡಿ ಜನತೆಯ ಆರೋಗ್ಯ ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಸಮೀಪದ ಮುದನೂರ(ಬಿ) ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದವರ ಸಂಖ್ಯೆ ಶನಿವಾರ 57ಕ್ಕೇರಿದ್ದು, ಆಸ್ಪತ್ರೆಗೆ ಅಧಿಕಾರಿಗಳು ಮತ್ತು ಗಣ್ಯರು ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದಾರೆ.

ಶುಕ್ರವಾರ(ಜು.19)ನಡೆದ ವಾಂತಿಭೇದಿ ನಿಲ್ಲುವಂತೆ ಕಾಣುವಂತಿಲ್ಲ. ಶನಿವಾರ ಮತ್ತೆ ತೀವ್ರವಾಗಿ ಉಲ್ಬಣಗೊಂಡಿದ್ದು, ಸಂಜೆ ವೇಳೆಗೆ 57 ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಇದರಲ್ಲಿ ಆರು ಚಿಕ್ಕ ಮಕ್ಕಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6ಮಕ್ಕಳಿಗೆ ಶಹಾಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುದನೂರು(ಬಿ) ಗ್ರಾಮದ ಜನತಾ ಕಾಲೋನಿಯಲ್ಲಿ ಈ ಘಟನೆ ಜರುಗಿದ್ದು, ವರದಿ ಬಂದ ಬಳಿಕ ಸತ್ಯಾಂಶ ಹೊರಬರಲಿದೆ. ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ತಿಳಿಸಿದ್ದಾರೆ.*ಬೀಡು ಬಟ್ಟ ವೈದ್ಯರ ದಂಡು

ಶನಿವಾರ ಬೆಳಗ್ಗೆಯಿಂದ ಸತತವಾಗಿ ವಾಂತಿ-ಭೇದಿ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಕೇಂದ್ರದಲ್ಲಿ ದಾಖಲಾಗುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದ ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಜಿಲ್ಲಾ ಕಾಲರಾ ಸರ್ವೇಕ್ಷಣಾಧಿಕಾರಿ ಡಾ.ಎಸ್.ಎಚ್. ಪಾಟೀಲ್, ಟಿಎಚ್‌ಒ ಡಾ.ಆರ್.ವಿ. ನಾಯಕ, ಆಡಳಿತ ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಡಾ. ಪ್ರಿಯಾಂಕಾ ಪಾಟೀಲ್, ಡಾ.ಸಿದ್ದು ನ್ಯಾಮಗೊಂಡ ಸೇರಿದಂತೆ ವಲಯದ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಹುಣಸಗಿ ಹಾಗೂ ಸುರಪುರ ತಾಲೂಕು ಕೇಂದ್ರದ ಆರೋಗ್ಯ ಕೇಂದ್ರದ ಸಿಬ್ಬಂದಿ ಬೀಡು ಬಿಟ್ಟಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.ಬಿಜೆಪಿ ಯುವ ನಾಯಕ ಬಬ್ಲೂಗೌಡ ಭೇಟಿ: ಶನಿವಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಸಹೋದರ ಬಿಜೆಪಿ ಯುವ ನಾಯಕ ಹಣಮಂತ ನಾಯಕ (ಬಬ್ಲೂಗೌಡ) ಅವರು ದಾಖಲಾದ ರೋಗಿಗಳ ಆರೋಗ್ಯ ವಿಚಾರಿಸಿದರು.

ಘಟನೆ ಕುರಿತು ವೈದ್ಯರುಗಳಿಂದ ಸಮಗ್ರ ಮಾಹಿತಿ ಪಡೆದ ಅವರು ಸತತ ಎರಡು ದಿನಗಳಿಂದ ನಿರಂತರ ಶ್ರಮ ವಹಿಸಿ ಜನತೆಗೆ ಸೂಕ್ತ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು. ನಂತರ ಮುದನೂರ ಗ್ರಾಮಕ್ಕೆ ಭೇಟಿ ನೀಡಿ ಕುಡಿವ ನೀರಿನ ಸ್ಥಳವನ್ನು ವೀಕ್ಷಿಸಿದರು. ಈ ವೇಳೆ ವೀರೇಶ ಚಿಂಚೋಳಿ, ಸಂಗಾರೆಡ್ಡಿ ಚೌಧರಿ, ವಿಜಯರೆಡ್ಡಿ ಚೌಧರಿ, ಕೃಷ್ಣಾರೆಡ್ಡಿ ಮುದನೂರ, ವೀರೇಶರೆಡ್ಡಿ ಸೇರಿದಂತೆ ಇತರರಿದ್ದರು.

ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪನೆ: ವಾಂತಿ-ಭೇದಿ ಪ್ರಕರಣ ಬೆಳಕಿಗೆ ಬರುತ್ತಲೆ ಮುದನೂರ (ಬಿ) ಗ್ರಾಮದಲ್ಲಿ ಆರೋಗ್ಯ ಇಲಾಖೆ, ನೀರು ಸರಬರಾಜು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಜನತೆಯ ಆರೋಗ್ಯ ವೀಕ್ಷಿಸುತ್ತಿದ್ದಾರೆ.

ಇದೇ ವೇಳೆ ಗ್ರಾಮದಲ್ಲೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಿರುವ ಆರೋಗ್ಯ ಇಲಾಖೆ ಪ್ರಕರಣ ಕಂಡು ಬಂದರೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಡಾ. ಆರ್. ವಿ.ನಾಯಕ ತಿಳಿಸಿದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ