ವಾಂತಿ, ಭೇದಿಗೆ ಕಲುಷಿತ ನೀರು ಕಾರಣವಲ್ಲ: ಡೀಸಿ ಸ್ಪಷ್ಟನೆ

KannadaprabhaNewsNetwork | Published : Aug 28, 2024 12:48 AM

ಸಾರಾಂಶ

ತಾಲೂಕಿನ ದೊಡ್ಡೇರಿ ಹೋಬಳಿ ಬುಳ್ಳಸಂದ್ರ ಗ್ರಾಮದಲ್ಲಿ ವರಿದಯಾದ ವಾಂತಿ, ಬೇಧಿ ಪ್ರಕರಣಕ್ಕೆ ಕಲೂಷಿತ ನೀರು ಕಾರಣವಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸ್ಪಷ್ಟಪಡಿಸಿದರು.

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಬುಳ್ಳಸಂದ್ರ ಗ್ರಾಮದಲ್ಲಿ ವರಿದಯಾದ ವಾಂತಿ, ಬೇಧಿ ಪ್ರಕರಣಕ್ಕೆ ಕಲೂಷಿತ ನೀರು ಕಾರಣವಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸ್ಪಷ್ಟಪಡಿಸಿದರು.

ಮಂಗಳವಾರ ಬುಳ್ಳಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಘಟನೆ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ನಂತರ ಮಾತನಾಡಿ ಬುಳ್ಳಸಂದ್ರ ವಾಂತಿ, ಭೇದಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಸುಮಾರು 160 ಮನೆಗಳಿರುವ ಬುಳ್ಳಸಂದ್ರದಲ್ಲಿ ಆ.24 ಶ್ರಾವಣ ಶನಿವಾರದ ಪ್ರಯುಕ್ತ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಮುತ್ತರಾಯ, ಕರಿಯಣ್ಣ ಮತ್ತು ಭೂತಪ್ಪ ಸ್ವಾಮಿಗಳ ಜಾತ್ರೆ ವೇಳೆ ತಿಮ್ಮಕ್ಕ (85), ಗಿರಿಯಮ್ಮ (90) ಹಾಗೂ ಕಾಟಮ್ಮ (45) ಸೇರಿ ಮೂರು ಮಂದಿ ಮಹಿಳೆಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ವೈದ್ಯರ ವರದಿ ಪ್ರಕಾರ ತಿಮ್ಮಕ್ಕ ಮತ್ತು ಗಿರಿಯಮ್ಮರವರ ಸಾವು ವಯೋಸಹಜವಾಗಿದ್ದು, ಸಾಯುವ ಮುನ್ನ ಇಬ್ಬರಲ್ಲೂ ವಾಂತಿ, ಭೇದಿ ಕಾಣಿಸಿಲ್ಲ, ಕಾಟಮ್ಮ ಎಂಬ ಮಹಿಳೆ ಆಂಧ್ರದ ಮಡಕಸಿರಾ ತಾಲೂಕು ಸಿದ್ದನಗಿರಿಯಿಂದ ಜಾತ್ರೆಗೆ ಬಂದಿದ್ದು, ಗ್ರಾಮಕ್ಕೆ ಬರುವ ಮುನ್ನವೇ ಈಕೆಗೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಇದರಿಂದ ಅಸ್ವಸ್ಥರಾಗಿ ಕಾಟಮ್ಮ ಮೃತಪಟ್ಟಿದ್ದಾರೆ. ಕಲುಷಿತ ನೀರಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ಸ್ಪಷ್ಟಪಡಿಸಿದರು.

ಜಾತ್ರೆ ವೇಳೆ ಗ್ರಾಮದವರು ಬಳಸಿದ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿ ಕುಡಿಯಲು ಯೋಗ್ಯವಿದೆ ಎಂದು ವರದಿ ಬಂದಿದೆ. ಮೃತಪಟ್ಟ ದುರ್ದೈವಿ ತಾವೇ ತಯಾರಿಸಿದ ಟೊಮ್ಯಾಟೋ ಬಾತ್‌ , ಮಜ್ಜಿಗೆ ಸೇವಿಸಿದ ನಂತರ ಅಸ್ವಸ್ಥರಾಗಿರುವ ಸಾಧ್ಯತೆ ಇದೆ. ಜಾತ್ರೆಗಳಲ್ಲಿ ಸ್ವಚ್ಛತೆ ಕಾಪಾಡದಿರುವುದರಿಂದಲೇ ಇಂತಹ ಪ್ರಕರಣಗಳು ಘಟಿಸುತ್ತಿವೆ. ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ವಾಂತಿ, ಭೇದಿಯಿಂದ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೆ ಇದೇ ತಾಲೂಕಿನಲ್ಲಿ ವಾಂತಿ, ಭೇದಿ ಪ್ರಕರಣ ವರದಿಯಾಗಿದೆ. ಸ್ವಚ್ಛತೆ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ ಎಂದರು.

ಬುಳ್ಳಸಂದ್ರದಲ್ಲಿ ಒಟ್ಟು 16 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಈ ಪೈಕಿ 9 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಮತ್ತು ಶ್ರೀದೇವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಗ್ರಾಮದ 18 ವರ್ಷದ ಯುವಕನೊಬ್ಬನಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿದ್ದ ತಾತ್ಕಾಲಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಪ್ರಸ್ತುತ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲವೆಂದು ಮಾಹಿತಿ ನೀಡಿದರು.

ಮುನ್ನಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಗ್ರಾಮದ ಸದಸ್ಯರ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸಬೇಕು. ಬರುವ ಆ.31ರಂದು ಕೊನೆ ಶ್ರಾವಣ ಶನಿವಾರ ಇರುವುದರಿಂದ ಗ್ರಾಮಗಳ ದೇಗುಲಗಳಲ್ಲಿ ವಿಶೇಷ ಪೂಜೆ ,ಜಾತ್ರೆಗಳು ನಡೆಯುವುದರಿಂದ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಸೂಚಿಸಿದರು.

ನಂತರ ಕೊರಟಗೆರೆ ತಾಲೂಕಿನ ಮುಗ್ಗಿರನ ಕಾಲೋನಿಯ ಶಿವಶಂಕರ್‌ ಹಾಗೂ ವೀರಭದ್ರಯ್ಯ ಅವರ ಜಮೀನಿಗೆ ಭೇಟಿ ನೀಡಿ ಮಳೆ ಹಾನಿಗೊಳಗಾದ ಮುಸುಕಿನ ಜೋಳದ ಬೆಳೆಯನ್ನು ಪರೀಕ್ಷಿಸಿದರು. ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಕೂಡಲೇ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿ ವಿಮಾ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಓರಿಯಂಟಲ್‌ ಇನ್ಸೂರೆನ್ಸ್ ವಿಮಾ ಕಂಪನಿಯ ಪ್ರತಿನಿಧಿ ದಯಾನಂದ ಹಾಗೂ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್‌, ಮಧುಗಿರಿ ಎಸಿ ಗೋಟೂರು ಶಿವಪ್ಪ, ಕೊರಟಗೆರೆ ತಹಸೀಲ್ದಾರ್‌ ಮಂಜುನಾಥ್‌, ಮಧುಗಿರಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಆಹಾರ ಸುರಕ್ಷತಾ ಅಧಿಕಾರಿ ಡಾ.ಹರೀಶ್‌ ,ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ ಇತರರಿದ್ದರು.

Share this article