ವಾಂತಿ ಭೇದಿ: ಮುತ್ತಗಿ ಗ್ರಾಮದಲ್ಲಿ ಆರೋಗ್ಯ ಸಮೀಕ್ಷೆ

KannadaprabhaNewsNetwork |  
Published : Oct 28, 2024, 01:21 AM IST
ಮದಮ | Kannada Prabha

ಸಾರಾಂಶ

ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ 22 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಧಾರವಾಡ: ಕಲಘಟಗಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿನ ಮೂರು ಓಣಿಗಳಲ್ಲಿ ಸರಬರಾಜು ಆಗಿದ್ದ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರಲ್ಲಿ ಉಂಟಾಗಿದ್ದ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ 22 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 38 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಸಮೀಕ್ಷೆ ನಡೆಸಿದೆ. ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ನೇತೃತ್ವದ ಆರೋಗ್ಯ ಇಲಾಖೆ ತಂಡ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದೆ. ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ನಡೆಸಿದರು. ಜತೆಗೆ ಜನರಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 5 ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, 3 ಆರೋಗ್ಯ ನಿರೀಕ್ಷಣಾಧಿಕಾರಿಗಳು, 3 ಸಮುದಾಯ ಆರೋಗ್ಯ ಅಧಿಕಾರಿಗಳು, 6 ಆಶಾ ಕಾರ್ಯಕರ್ತೆಯರು, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಲು ಹಾಗೂ ಇಬ್ಬರು ಶುಶ್ರೂಷಕ ಅಧಿಕಾರಿಗಳ ತಂಡ ಸಮೀಕ್ಷೆ ಹಾಗೂ ಅಲ್ಲಿನ ಜನರ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದೆ. ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

22 ಜನ ಡಿಸ್ಚಾರ್ಜ್‌

ಈ ನಡುವೆ ವಾಂತಿ ಭೇದಿಯಿಂದ 60ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 22 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗಳಿಗೆ ತೆರಳಿದ್ದಾರೆ. ಇನ್ನು 38 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 38 ಜನರು ಕಲಘಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 13 ಜನರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಇರುವವರ ಆರೋಗ್ಯ ಸುಧಾರಣೆ ಆಗಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ, ಅಗತ್ಯ ಔಷಧಿಗಳನ್ನು ನಿಯಮಿತವಾಗಿ ಕೊಡುತ್ತಿದ್ದಾರೆ.

ಕಲಘಟಗಿ ತಾಲೂಕಾಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಯಶವಂತ ಮದಿನಕರ ಉಸ್ತುವಾರಿಯಲ್ಲಿ, ಒಳರೋಗಿಗಳ ಚಿಕಿತ್ಸೆಗಾಗಿ ವೈದ್ಯರು ಮತ್ತು ಶುಶ್ರೂಷಕ ಅಧಿಕಾರಿಗಳು ದಿನದ 3 ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಆಸ್ಪತ್ರೆಗಳ ಹೆಚ್ಚುವರಿ ಚಿಕಿತ್ಸೆಗಾಗಿ ಎರಡು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳನ್ನು ತಾಲೂಕು ಆಸ್ಪತ್ರೆಯಲ್ಲಿ ರಾತ್ರಿಯ ಸಮಯದಲ್ಲೂ ಕರ್ತವ್ಯದಲ್ಲಿರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುತ್ತಗಿ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ವಯೋವೃದ್ಧರ, ಗರ್ಭಿಣಿಯರ, ಮಕ್ಕಳ ಮತ್ತು ಅಧಿಕ ರಕ್ತದೋತ್ತಡ ಇರುವ ರೋಗಿಗಳಿಗೆ ವಿಶೇಷ ಕಾಳಜಿ ವಹಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ