ಚುನಾವಣೆಗಳಲ್ಲಿ ಸಕ್ರಿಯವಾಗಿ ಮತದಾನ ಮಾಡಿ: ನ್ಯಾ.ಯೋಗೇಶ್ ಮನವಿ

KannadaprabhaNewsNetwork |  
Published : Jan 26, 2025, 01:33 AM IST
25ಕೆಎಂಎನ್ ಡಿ18 | Kannada Prabha

ಸಾರಾಂಶ

ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸ ಹೊಂದಿರುವ ನಾವು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು. ರಾಷ್ಟ್ರೀಯ ಮತದಾರರ ದಿನದ ಮಹತ್ವ ಕುರಿತು ಓದಿದ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಪ್ರತಿಯೊಬ್ಬರೂ ಕೂಡ ಪ್ರತಿಜ್ಞಾವಿಧಿಯನ್ನು ತಮ್ಮ ಜೀವನಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಬಲಿಷ್ಟ ಭಾರತ ನಿರ್ಮಾಣ ಮಾಡಲು ಮತದಾರರು ಪ್ರಜ್ಞಾ ಪೂರ್ವಕವಾಗಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಡ್ಡಾಯವಾಗಿ ಮತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಮನವಿ ಮಾಡಿದರು.

ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸರ್ಕಾರ ಆಯ್ಕೆ ಮಾಡಿ ಯಾರು ಅಧಿಕಾರ ನಡೆಸಬೇಕೆಂಬುದಕ್ಕೆ ಸಂವಿಧಾನ ನಮಗೆ ಕೊಟ್ಟಿರುವ ಅತ್ಯಂತ ಶಕ್ತಿಯುತ ಆಯುಧವೆಂದರೆ ಅದು ಪವಿತ್ರವಾದ ಮತದಾನ ಮಾತ್ರ ಎಂದರು.

ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸ ಹೊಂದಿರುವ ನಾವು ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು. ರಾಷ್ಟ್ರೀಯ ಮತದಾರರ ದಿನದ ಮಹತ್ವ ಕುರಿತು ಓದಿದ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗದೆ ಪ್ರತಿಯೊಬ್ಬರೂ ಕೂಡ ಪ್ರತಿಜ್ಞಾವಿಧಿಯನ್ನು ತಮ್ಮ ಜೀವನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

18 ವರ್ಷ ಮೇಲ್ಪಟ್ಟ ಯುವ ಸಮುದಾಯ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರ್ಭೀತರಾಗಿ, ಧರ್ಮ, ಜನಾಂಗ, ಜಾತಿ ಮತ ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಕ್ಕೊಳಗಾಗದೆ ಪ್ರಾಮಾಣಿಕವಾಗಿ ಮತ ಚಲಾಯಿಸಲು ಮುಂದಾಗಬೇಕು. ಚುನಾವಣೆಯಲ್ಲಿ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಉತ್ತಮ ಸಮಾಜ ನಿರ್ಮಿಸುವ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬಹುದು ಎಂದರು.

ರಾಷ್ಟ್ರೀಯ ಮತದಾರರ ದಿನದ ಮಹತ್ವ ಕುರಿತು ಪ್ರತಿಜ್ಞಾವಿಧಿ ಬೋಧಿಸಿದ ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ಕಾಲೇಜು ಹಂತದ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಂವಿಧಾನದಲ್ಲಿನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡುವ ಜೊತೆಗೆ ಅವುಗಳನ್ನು ಪಾಲನೆ ಮಾಡಿದರೆ ಮಾತ್ರ ಇಂತಹ ಕಾರ್ಯಕ್ರಮ ಸಾರ್ಥಕತೆಯಾಗುತ್ತದೆ ಎಂದರು.

ಡಿವೈಎಸ್‌ಪಿ ಚಲುವರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ, ಚುನಾವಣಾ ಶಿರಸ್ತೇದಾರ್ ಚಂದ್ರಶೇಖರ್ ಹಾಗೂ ಕಾಲೇಜಿನ ಪ್ರಾಂಶುಪಾಲೆ ಆರ್.ಆಶಾ ಮಾತನಾಡಿದರು. ಬಳಿಕ ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಮತದಾನದ ಹೊಸ ಗುರತಿನ ಚೀಟಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸಿ.ಕೃಷ್ಣಮೂರ್ತಿ, ತಾ.ಪಂ.ನ ಸಹಾಯಕ ನಿರ್ದೇಶಕ ವಿ.ಕೃಷ್ಣಮೂರ್ತಿ, ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್.ಶ್ರೀದೇವಿ, ಅಪರ ಸರ್ಕಾರಿ ವಕೀಲ ಎಲ್.ಎಸ್.ಶಿವಲಿಂಗೇಗೌಡ, ವಕೀಲೆ ಮಂಜುಳ, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್, ಕಂದಾಯ ಇಲಾಖೆಯ ಮಧುಸೂಧನ್, ಗಣೇಶ್ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ