ಮತ ಚಲಾಯಿಸಿ ಸಂವಿಧಾನ ಆಶಯ ಸಾಕಾರಗೊಳಿಸಿ: ದುಂಡಪ್ಪ ತುರಾದಿ

KannadaprabhaNewsNetwork | Updated : Apr 29 2024, 01:31 AM IST

ಸಾರಾಂಶ

ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಸಂವಿಧಾನ ಆಶಯವನ್ನು ಸಾಕಾರಗೊಳಿಸಬೇಕು.

ಕೊಪ್ಪಳ ತಾಲೂಕು ಪಂಚಾಯಿತಿಯ ಮತಗಟ್ಟೆಯ ಮೇಲೆ ಧ್ವಜಾರೋಹಣ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತವು ವಿಶ್ವದಲ್ಲಿಯೇ ಅತೀ ದೊಡ್ಡ ಸಂವಿಧಾನ ಹೊಂದಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತ ಚಲಾಯಿಸಲು ಅವಕಾಶ ನೀಡಿದೆ. ಹಾಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಸಂವಿಧಾನ ಆಶಯವನ್ನು ಸಾಕಾರಗೊಳಿಸಬೇಕೆಂದು ಕೊಪ್ಪಳ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.

ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಪ್ರಯುಕ್ತ ಕೊಪ್ಪಳ ತಾಲೂಕು ಪಂಚಾಯಿತಿಯ ಮತಗಟ್ಟೆಯ ಮೇಲೆ ಭಾನುವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮೇ 7ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ನಾವು ಕೂಡಾ ತಪ್ಪದೇ ಮತ ಚಲಾಯಿಸಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.

ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಜಿಲ್ಲೆಯ ಮತದಾನ ಶೇಕಡಾವಾರು ಪ್ರಮಾಣ ಹೆಚ್ಚಿಸಲು ಆಯೋಗದ ಉದ್ದೇಶವನ್ನು ಈಡೇರಿಸೋಣ. ಮತದಾನ ಪವಿತ್ರವಾದ ಕಾರ್ಯವಾಗಿದ್ದು, ಪ್ರತಿ ಮತದಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಅಡಗಿದೆ ಎಂದರು.

ಇದೇ ಸಂದರ್ಭದಲ್ಲಿ ಚುನಾವಣೆ ಆಯೋಗ ಬಿಡುಗಡೆ ಮಾಡಿದ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ನಂತರ ಕಡ್ಡಾಯ ಮತದಾನ ಮಾಡಲು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಪೂರ್ಣಿಮಾ ಏಳುಬಾವಿ, ಮೆಹಬೂಬ ಕಿಲ್ಲೆದಾರ, ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ಹನುಮಂತಪ್ಪ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕು ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ವೀರೇಶ್ ಬಡಿಗೇರ, ತಾಲೂಕು ಪಂಚಾಯಿತಿ ಸಿಬ್ಬಂದಿ ಹನುಮಂತರಾವ್, ಸುರೇಶ, ಚಂದ್ರಹಾಸ, ಮೆಹಬೂಬ ಪಾಶಾ, ಗಿರೀಶ ಹಾಗೂ ಇತರೆ ಸಿಬ್ಬಂದಿಯಿದ್ದರು.

Share this article