ಶಿರಹಟ್ಟಿ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಎಲ್ಲ ಮತದಾರರು ಚುನಾವಣೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಬೇಕು. ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮತದಾನ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಗುಣಾತ್ಮಕ ಮತ್ತು ಪಾರದರ್ಶಕ ಮತದಾನ ಜರುಗಲು ಪ್ರತಿಯೊಬ್ಬರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸಬೇಕು ಎಂದು ತಹಸೀಲ್ದಾರ್ ಅನಿಲ ಬಡಿಗೇರ ಕರೆ ನೀಡಿದರು.
ಪ್ರತಿಯೊಬ್ಬರು ಸಂವಿಧಾನಬದ್ಧ ಮತದಾನದ ಹಕ್ಕಿನ ಅರಿವು ಪಡೆದುಕೊಳ್ಳಬೇಕು. ಆಸೆ, ಆಮಿಷಗಳಿಗೆ ಬಲಿಯಾಗದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರು ಸರಿಯಾದ ವ್ಯಕ್ತಿಗೆ ಮತ ನೀಡಬೇಕು. ಜನರು ಚುನಾವಣೆಯನ್ನು ನಿರ್ಲಕ್ಷ್ಯ ಮಾಡದೇ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.
ಮತದಾನದಲ್ಲಿ ಸರ್ವರೂ ಪಾಲ್ಗೊಳ್ಳಬೇಕೆಂಬುದು ಚುನಾವಣಾ ಆಯೋಗದ ಗುರಿ. ಈ ನಿಟ್ಟಿನಲ್ಲಿ ಮತದಾನ ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ನಿರ್ಭಿಡೆಯಿಂದ ಮತದಾನ ಮಾಡಬೇಕು. ದೇಶ ಕಟ್ಟುವ ಜವಾಬ್ದಾರಿ ನಮ್ಮ ಯುವಕರಲ್ಲಿದ್ದು, ಯುವ ಜನತೆ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.ನೂರಕ್ಕೆ ನೂರು ಮತದಾನ ಆಗಲೇಬೇಕು ಎಂಬ ಮಹದಾಸೆಯಿಂದ ಚುನಾವಣಾ ಆಯೋಗ ವಿವಿಧ ಹಂತಗಳಲ್ಲಿ ಅರಿವು, ತರಬೇತಿ ಕಾರ್ಯಕ್ಕೆ ಮುಂದಾಗಿದೆ. ನಿಮ್ಮನ್ನು ಆಳುವವರನ್ನು ಆಯ್ಕೆಮಾಡಿಕೊಳ್ಳುವ ತೀರ್ಮಾನ ನಿಮ್ಮ ಕೈಯಲ್ಲಿದ್ದು, ಜನಸ್ನೇಹಿ ಮತದಾನಕ್ಕೆ ಮುಂದಾಗಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ನಿಂಗಪ್ಪ ಓಲೇಕಾರ ಮಾತನಾಡಿ, ಜಗತ್ತಿನ ಯಾವ ದೇಶದಲ್ಲಿಯೂ ಮಾದರಿ ಮತ್ತು ಪ್ರಾಮಾಣಿಕ ಚುನಾವಣೆ ನಡೆಯುತ್ತಿಲ್ಲ ಎಂಬ ವರದಿ ಇದೆ. ಭಾರತ ದೇಶ ಬೇರೆ ದೇಶಗಳಿಗೆ ಮಾದರಿಯಾಗಿದೆ.
ಮತದಾನ ನಮ್ಮ ಹಕ್ಕಾಗಿದ್ದು ಗುಣಾತ್ಮಕ ಮತ್ತು ಪಾರದರ್ಶಕ ಮತದಾನ ಜರುಗಲು ಪ್ರತಿಯೊಬ್ಬರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವುದು ಅಗತ್ಯವಾಗಿದ್ದು, ಯಾರ ಒತ್ತಡಕ್ಕೂ ಮಣಿಯದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ಸರಿಯಾದ ವ್ಯಕ್ತಿಗೆ ಮತ ನೀಡಬೇಕು ಎಂದು ಹೇಳಿದರು.