ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ: ಕುಮಾರಸ್ವಾಮಿ

KannadaprabhaNewsNetwork | Updated : Apr 29 2024, 11:42 AM IST

ಸಾರಾಂಶ

ಪ್ರತಿಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು.

 ಕಾರಟಗಿ :  ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವದ ಭಾರತದಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಪ್ರತಿಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಪುರಸಭೆ ನೇತೃತ್ವದಲ್ಲಿ ನಾನಾ ಇಲಾಖೆಗಳ ಸಹಯೋಗದೊಂದಿಗೆ ನಡೆದ ‘ನಮ್ಮ ನಡೆ ಮತಗಟ್ಟೆ ಕಡೆ’ ಎಂಬ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೇ ೭ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಮತಗಟ್ಟೆಗಳಲ್ಲಿ ಮತದಾರರಿಗೆ ಮತ ಚಲಾಯಿಸಲು ಎಲ್ಲ ರೀತಿಯ ಸೌಕರ್ಯ ಮಾಡಲಾಗಿದೆ. ಅಂದು ಮತದಾರರು ತಪ್ಪದೆ ಮತಗಟ್ಟೆಗಳಿಗೆ ಆಗಮಿಸಿ ನಿರ್ಭೀತಿಯಿಂದ ಮತ ಚಲಾಯಿಸಬೇಕು. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಶೇ.೭೦-೭೫ ಮತ ಚಲಾಯಿಸಲಾಗುತ್ತಿತ್ತು. ಆದರೆ, ಈ ಬಾರಿ ನೂರಕ್ಕೆ ನೂರು ಮತ ಚಲಾಯಿಸಿ ಯಶಸ್ವಿಗೊಳಿಸಿರಿ ಎಂದರು.

ಪುರಸಭಾ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಮಾತನಾಡಿ, ಮತದಾರರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಶೇ.೧೦೦ರಷ್ಟು ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೊಪ್ಪಳ ಜಿಲ್ಲಾ ಚುನಾವಣಾ ರಾಯಭಾರಿ ರಮ್ಯಾಕೃಷ್ಣ ಮಾತನಾಡಿ, ತಮ್ಮ ಅಮೂಲ್ಯವಾದ ಮತ ಚಲಾಯಿಸಿ ತಮ್ಮ ನಗರದ ಅಭಿವೃದ್ಧಿಗೆ ಸಹಕರಿಸುವ ಅಭ್ಯರ್ಥಿಯನ್ನು ಆರಿಸಿ ತನ್ನಿ ಎಂದರು.

ನಿಮ್ಮ ಮತವನ್ನು ಚಲಾಯಿಸಿ ಭಾರತವನ್ನು ಗೆಲ್ಲಿಸಿ ಮತ್ತು ನಮ್ಮ ನಡೆ ಮತಗಟ್ಟೆ ಕಡೆ ಎನ್ನುವ ಧ್ಯೇಯದೊಂದಿಗೆ ತಾಲೂಕು ದಂಡಾಧಿಕಾರಿ ಎಂ. ಕುಮಾರಸ್ವಾಮಿ ಮತ್ತು ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

ವಿವಿಧ ಇಲಾಖೆಗಳ ಹಾಗೂ ಪುರಸಭೆಯ ನೌಕರರು ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಕನಕದಾಸ ವೃತ್ತದ ಬಸ್ ನಿಲ್ದಾಣದವರೆಗೆ ಜಾಥಾ ನಡೆಸಿದರು.

ಪುರಸಭೆಯ ಲೆಕ್ಕಾಧಿಕಾರಿ ನಾಗರಾಜ ತಳವಾರ, ಆರೋಗ್ಯಾಧಿಕಾರಿ ಅಕ್ಷತಾ ಕಮ್ಮಾರ, ಚೆನ್ನಬಸವ, ಮಲ್ಲಮ್ಮ, ಅನಂತಪದ್ಮನಾಭ, ಬಿ. ಆದೆಪ್ಪ, ನಾಗೇಶ, ಪವನಕುಮಾರ, ಹನುಮೇಶ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಹಾಗೂ ಪೌರ್ಯ ಪೌರಕಾರ್ಮಿಕರು ಪಾಲ್ಗೊಂಡಿದ್ದರು.

Share this article