ನೆಮ್ಮಾರು ಎಸ್ಟೇಟ್‌ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ ನಿರ್ಧಾರ

KannadaprabhaNewsNetwork |  
Published : Apr 09, 2024, 12:50 AM IST
್ಿ | Kannada Prabha

ಸಾರಾಂಶ

ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರು ಎಸ್ಟೇಟ್‌ ಗ್ರಾಮಸ್ಥರು ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿರುವುದರಿಂದ 2024 ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಿ ಮತದಾನ ಮಾಡದಿರಲು ನಿರ್ಧರಿಸಿ ಗ್ರಾಮದಲ್ಲಿ ಬ್ಯಾನರ್‌ ಅಳವಡಿಸಿದ್ದಾರೆ.

ಗ್ರಾಮದಲ್ಲಿ ಬ್ಯಾನರ್‌ ಅಳವಡಿಕೆ । ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯವೇ ಇಲ್ಲ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರು ಎಸ್ಟೇಟ್‌ ಗ್ರಾಮಸ್ಥರು ಕುಡಿಯುವ ನೀರು ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗಿರುವುದರಿಂದ 2024 ಲೋಕಸಭಾ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಿ ಮತದಾನ ಮಾಡದಿರಲು ನಿರ್ಧರಿಸಿ ಗ್ರಾಮದಲ್ಲಿ ಬ್ಯಾನರ್‌ ಅಳವಡಿಸಿದ್ದಾರೆ.

ಈ ಬಗ್ಗೆ ಗ್ರಾಮಸ್ಥ ಚಂದ್ರಶೇಖರ್ ಮಾತನಾಡಿ ನಾವು ಕಳೆದ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಕುಡಿಯುವ ನೀರಿನ ಸೌಕರ್ಯವಿಲ್ಲ. ಬಡವರಿಗೆ ಸ್ವಂತ ನಿವೇಶನ ಮಂಜೂರಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಉಪಟಳ ಜಾಸ್ತಿಯಾಗಿದೆ. ಬೀದಿ ದೀಪವಿಲ್ಲ. ಕಳೆದ ಅನೇಕ ವರ್ಷಗಳಿಂದ ನಾವು ಬೇಡಿಕೆಗಳನ್ನು ಮುಂದಿಡು ತ್ತಿದ್ದರೂ ನಮಗೆ ಕೇವಲ ಭರವಸೆಗಳನ್ನಷ್ಟು ನೀಡುತ್ತಿದ್ದಾರೆ. ಯಾವುದೇ ಮೂಲಸೌಕರ್ಯ ಒದಗಿಸುತ್ತಿಲ್ಲ. ನಾವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದರು.

ಯಶೋದ ಮಾತನಾಡಿ ಇಲ್ಲಿ ಶಾಶ್ವತ ಕುಡಿಯುವ ನೀರಿನ ಸೌಕರ್ಯವಿಲ್ಲ. ಜಲಜೀವನ್ ಮಿಶನ್‌ ನಲ್ಲಿಗಳಿದ್ದರೂ ನೀರಿಲ್ಲ. ಬೇಸಿಗೆಯಲ್ಲಿ ದೂರದ ತುಂಗಾನದಿ ಮಳೆಗಾಲದಲ್ಲಿ ಮಳೆ ನೀರೆ ಗತಿ. ನಾವು ಅನೇಕ ಬಾರಿ ಮನವಿ ಮಾಡುತ್ತಲೇ ಬಂದಿದ್ದೇವೆ. ಎಷ್ಟು ಮನವಿಗಳನ್ನು ನೀಡಿದರೂ ಅಷ್ಟೇ, ಕಳೆದ ವಿಧಾನ ಸಭೆ ಚುನಾವಣೆ ವೇಳೆಯಲ್ಲಿ ನೆಮ್ಮಾರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಿ ಮನವಿ ನೀಡಿದ್ದೇವೆ. ಆಗಲೂ ಕೇವಲ ಭರವಸೆ ನೀಡಿದ್ದರು. ಇನ್ನೂ ಕುಡಿಯುವ ನೀರಿನ ಸೌಕರ್ಯವಿಲ್ಲ.ನಾವು ಏಕೆ ಮತ ಹಾಕಬೇಕು ಎಂದರು.

ಚಂದ್ರಶೇಖರ್‌ ಎನ್‌.ಎಲ್‌.ಮಾತನಾಡಿ 94 ಸಿ ಅರ್ಜಿಗಳು ನೆನೆಗುದಿಗೆ ಬಿದ್ದಿದೆ. ಬಡವರಿಗೆ ಸೂರಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿಲ್ಲ. ನಮ್ಮ ಗೋಳನ್ನು ಕೇಳವವರಿಲ್ಲ. ಚುನಾವಣೆ ಸಂದರ್ಭದಲ್ಲಿ ಬಂದು ಭರವಸೆ ನೀಡಿ ಹೋಗುತ್ತಾರೆ. ಮತ್ತೆ ಬರುವುದು ಚುನಾವಣೆ ಸಂದರ್ಭದಲ್ಲಿ.ರಸ್ತೆ ಅಗಲೀಕರಣದಿಂದ ಪರಿಹಾರ ವಿಲ್ಲ.ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಗ್ರಾಮಸ್ಥ ತಮ್ಮಣ್ಣ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆಯಲ್ಲಿ ನನ್ನ ಮನೆ ಸೇರಿದಂತೆ 4 ಮನೆಗಳನ್ನು ತೆರವುಗೊಳಿಸಿದ್ದಾರೆ. ಇನ್ನೂ ಪರಿಹಾರ ನೀಡಿಲ್ಲ. ಮನೆ ಕಳೆದುಕೊಂಡು ಬಾಡಿಕೆ ಮನೆಯಲ್ಲಿದ್ದೇವೆ. ಅತ್ತ ಮನೆಯೂ ಇಲ್ಲ.ಇತ್ತ ಬಾಡಿಗೆಯನ್ನು ಕಟ್ಟಲಾಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಭೂಕುಸಿತ ಉಂಟಾಗುತ್ತಿದ್ದು ಕೆಲ ದಿನಗಳ ಹಿಂದೆ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿತ್ತು. ಇನ್ನೂ ಮಳೆ ಬಂದರೆ ಭೂಕುಸಿತ ಉಂಟಾಗಿ ಹಾನಿಯುಂಟಾಗಲಿದೆ. ನಮ್ಮ ಸಮಸ್ಯೆಗೆ ಸ್ಪಂದಿಸಿ ಪರಿಹರಿಸುವವರೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು.

ಗ್ರಾಮಸ್ಥರಾದ ರಮೇಶ್‌, ಸುನಿತಾ, ದಿವ್ಯಾ, ಚಂದ್ರು, ಕಿಶೋರ, ಶ್ವೇತ, ಕಿರಣ, ಗಣೇಶ್‌, ಜಯ, ಕುಕ್ರಯ್ಯ, ಚಂದ್ರು, ಮಂಜುಳಾ, ಯೋಗೆಂದ್ರ, ಸತೀಶ್‌ ಮತ್ತಿತರರು ಇದ್ದರು.

8 ಶ್ರೀ ಚಿತ್ರ 2-

ಶೃಂಗೇರಿ ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರು ಎಸ್ಟೇಟ್‌ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿ ಬ್ಯಾನರ್‌ ಅಳವಡಿಸಿರುವುದು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ