ಬಿಜೆಪಿ ಮಂಡಲ ಬೂತ್ ವಿಜಯ ಅಭಿಯಾನ ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆ
ಇದು ಸ್ಥಳೀಯ ಹಾಗೂ ವಿಧಾನಸಭೆಯ ಚುನಾವಣೆ ಅಲ್ಲ. ಲೋಕಸಭೆಯ ಚುನಾವಣೆಯಾಗಿದ್ದು ದೇಶದ ಸುಭದ್ರತೆ, ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಸಂಸದ ಸಂಗಣ್ಣ ಕರಡಿ ಮನವಿ ಮಾಡಿದರು.
ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ಮಂಡಲ ಬೂತ್ ವಿಜಯ ಅಭಿಯಾನ ಹಾಗೂ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದರು.ಕೊಪ್ಪಳ ಲೋಕಸಭೆಯ ಬಿಜೆಪಿಯ ಅಭ್ಯರ್ಥಿ ಡಾ. ಬಸವರಾಜ ಅವರಿಗೆ ನಿಮ್ಮ ಆಶೀರ್ವಾದ ಮಾಡಬೇಕು. ಅವರು ಒಳ್ಳೆಯ ವಿದ್ಯಾವಂತರು, ಯುವಕರಾಗಿದ್ದು, ಅವರಿಗೆ ಮತ ನೀಡಿ ಆಶೀರ್ವದಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಅಬ್ ಕೀ ಬಾರ್ 400 ಪಾರ್ ಆಗಬೇಕಿದೆ. ಇಂಡಿಯಾ ಕೂಟದಲ್ಲಿ ಪ್ರಧಾನಿ ಯಾರಾಗಬೇಕು ಎಂದು ನಿರ್ಧಾರವಿಲ್ಲ. ಅವರಂಥ ಸಮರ್ಥ ನಾಯಕ ಈ ದೇಶ ಕಾಣಲು ಸಾಧ್ಯವಿಲ್ಲ. ಜಗತ್ತಿನಲ್ಲೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಭಾರತ ಮುಂದಿದೆ. ಅದು ಬಿಜೆಪಿಯಿಂದ, ಮೋದಿಯವರ ನಾಯಕತ್ವ ಕಾರಣ ಎಂದರು.
ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ಅಭ್ಯರ್ಥಿ ಎಂಪಿ ಅಗುವುದು ನಮ್ಮ ಹೆಮ್ಮೆಯ ವಿಷಯವಾಗಲಿದೆ. ನನ್ನ ಚುನಾವಣೆಯಲ್ಲಿ ಆಶೀರ್ವದಿಸಿದಂತೆ ಡಾ. ಬಸವರಾಜ ಅವರಿಗೆ ಆಶೀರ್ವಾದ ಮಾಡಬೇಕು. ಇಲ್ಲಿ ಜಾತಿ ಧರ್ಮ ಎಂದು ಬೇಧ ಭಾವ ಮಾಡದೆ ಒಗ್ಗಟ್ಟಿನಿಂದ ಮತ ಹಾಕಿ ಮೋದಿಗೆ ಬಲ ತುಂಬಬೇಕು ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ ಮಾತನಾಡಿ, ದೇಶದ ಭದ್ರತೆಗಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ರಹಿತ ಸರಕಾರ ಬಿಜೆಪಿಯ ನರೇಂದ್ರ ಮೋದಿ ಸರಕಾರ ಮಾತ್ರ ಕೊಡಲು ಸಾಧ್ಯ. ಮೋದಿ ಮೋದಿ ಎಂದರೆ ಹೊಡೆಯಿರಿ ಎನ್ನುವ ಸಚಿವರಿಗೆ ಮಾತಿನಿಂದ ಹೊಡೆಯುವುದು ಬೇಡ, ಮತದಾನದಿಂದ ಹೊಡೆಯಿರಿ. ನಮ್ಮ ಕಾರ್ಯಕರ್ತರ ಮೇಲೆ ಅನಾವಶ್ಯಕ ಕೇಸ್ ದಾಖಲು ಮಾಡುತ್ತಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಮಾಜಿ ಶಾಸಕ ಬಸವರಾಜ ದಢೇಸೂಗುರ, ನಾಗಪ್ಪ ಸಾಲೋಣಿ, ಕೆ. ಶರಣಪ್ಪ, ಕೆ. ವಿರೂಪಾಕ್ಷಪ್ಪ, ಪರಣ್ಣ ಮುನವಳ್ಳಿ, ಪ್ರಭಾಕರ ಚಿಣಿ, ಬಸವರಾಜ ಹಳ್ಳೂರ, ನಾಗರಾಜ ತಳವಾರ, ಶರಣಪ್ಪ ಕುಂಬಾರ, ಅಮ್ನುದ್ದೀನ ಮುಲ್ಲಾ, ನಬಿಸಾಬ ಕುಷ್ಟಗಿ, ಫಕೀರಪ್ಪ ವಕೀಲರು ದೇವೇಂದ್ರಪ್ಪ ಬಳೂಟಗಿ, ಮಲ್ಲಣ್ಣ ಪಲ್ಲೇದ ಸೇರಿದಂತೆ ಇತರರು ಇದ್ದರು.