ಕಾಂಗ್ರೆಸ್‌ ನಿರ್ಮೂಲನೆಗೆ ಬಿಜೆಪಿಗೆ ಮತ ನೀಡಿ: ಆನಂದ ಸಿಂಗ್

KannadaprabhaNewsNetwork |  
Published : Mar 31, 2024, 02:03 AM IST
ದ್ದಗದ | Kannada Prabha

ಸಾರಾಂಶ

ನರೇಂದ್ರ ಮೋದಿ ಅವರ ಆಡಳಿತ ಇರೋವರೆಗೂ ನಮ್ಮ ದೇಶದಲ್ಲಿ ಯಾವ ದುಷ್ಟ ಶಕ್ತಿಯೂ ಹುಟ್ಟುವುದಿಲ್ಲ. ಉಗ್ರ ಶಕ್ತಿಗಳು, ಬಂದೂಕು ಬಟ್ಟೆಯನ್ನು ಸೂಟ್ ಕೇಸ್ ನೊಳಗೆ ಹಾಕಿಕೊಂಡಿವೆ.

ಹೊಸಪೇಟೆ: ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡಲು ಬಿಜೆಪಿಗೆ ಮತದಾನ ಮಾಡಿ. ಈ ಮೂಲಕ ರಾಮ ರಾಜ್ಯ ಕಟ್ಟಬೇಕಿದೆ ಎಂದು ಮಾಜಿ ಸಚಿವ ಆನಂದ್ ಸಿಂಗ್ ಹೇಳಿದರು.

ತಾಲೂಕಿನ ಹೊಸೂರು ಗ್ರಾಮದಲ್ಲಿ ಶನಿವಾರ ಬಳ್ಳಾರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರವಾಗಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರ ಆಡಳಿತ ಇರೋವರೆಗೂ ನಮ್ಮ ದೇಶದಲ್ಲಿ ಯಾವ ದುಷ್ಟ ಶಕ್ತಿಯೂ ಹುಟ್ಟುವುದಿಲ್ಲ. ಉಗ್ರ ಶಕ್ತಿಗಳು, ಬಂದೂಕು ಬಟ್ಟೆಯನ್ನು ಸೂಟ್ ಕೇಸ್ ನೊಳಗೆ ಹಾಕಿಕೊಂಡಿವೆ. ನರೇಂದ್ರ ಮೋದಿ ಅವರನ್ನು ಸೋಲಿಸಲು ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಸುತ್ತಮುತ್ತಲಿನ ವಿರೋಧಿ ದೇಶಗಳು ಕಾಂಗ್ರೆಸ್ ಗೆ ಕೈ ಜೋಡಿಸಿವೆ. ಶತ್ರು ದೇಶಗಳು ತಮ್ಮ ಕೃತ್ಯವನ್ನು ಗಡಿ ಭಾಗದಿಂದ ಒಳಗೆ ಬರುವ ಸಂಚು ಹಾಕಿಕೊಂಡಿವೆ. ಕೇಂದ್ರದಲ್ಲಿ ಮೋದಿಯನ್ನು ಸೋಲಿಸಲು ಯಾವ ಗಂಡಿನಿಂದಲೂ ಸಾಧ್ಯವಿಲ್ಲ ಎಂದರು.

ಬಿಜೆಪಿ ಹೊಡೆತಕ್ಕೆ ರಾಜ್ಯ ಕಾಂಗ್ರೆಸ್ ನಲ್ಲಿ ಲೋಕಸಭೆ ಅಭ್ಯರ್ಥಿಯಾಗಿ ನಾನ್ ಒಲ್ಲೆ, ನೀನ್ ಒಲ್ಲೇ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನಿಂದ ಈ.ತುಕಾರಾಂ ಗೆದ್ದರೆ, ಮಗಳಿಗೆ ಟಿಕೆಟ್ ನೀಡಬೇಕು. ಸೋತರೆ ಮಂತ್ರಿ ಮಾಡಬೇಕು ಎಂದು ವ್ಯಾಪಾರದ ಒಪ್ಪಂದ ಮಾಡಿದ್ದಾರೆ. ತುಪ್ಪ ಹೇಗಾದರೂ ತನ್ನ ತಟ್ಟೆಯಲ್ಲಿ ಬೀಳುವಂತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕಿದ್ದರೆ ಎಳ್ಳುನೀರು ಬಿಟ್ಟಂಗೆ. ಶ್ರೀರಾಮುಲು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ. ಈ ಕ್ಷೇತ್ರಕ್ಕೆ ಬೇಕಾಗುವ ಅಭಿವೃದ್ಧಿ ಕಾರ್ಯಕ್ಕೆ ನಾನು ಸೇತುವೆ ಆಗುವೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ಧಾರ್ಥ ಸಿಂಗ್, ಅಧ್ಯಕ್ಷೆ ಜಯಪದ್ಮ, ಉಪಾಧ್ಯಕ್ಷ ಎಂ.ಲಕ್ಷ್ಮಣ, ನಗರಸಭೆ ಸದಸ್ಯರಾದ ಕಿರಣ್ ಶಂಕ್ರಿ, ತಾರಿಹಳ್ಳಿ ಜಂಬಯ್ಯನಾಯಕ ಇತರರಿದ್ದರು.

ಪ್ರಧಾನಿ ಜತೆ ನಿಕಟ ಸಂಬಂಧ: ತುಂಗಭದ್ರಾ ಜಲಾಶಯಕ್ಕೆ ಸಮತೋಲನ ಜಲಾಶಯ ನಿರ್ಮಾಣದ ಪ್ರಯತ್ನ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿತ್ತು. ಅದಕ್ಕೆ ಮತ್ತೆ ಜೀವ ತುಂಬಬೇಕಿದೆ. ಕಾಲುವೆಗಳ ಕೊನೆಯವರೆಗೆ ನೀರು ಸಿಗಬೇಕಿದೆ. ಈ ಭಾಗದ ಇನ್ನಷ್ಟು ಸಮಸ್ಯೆಗಳ ಸಂಪೂರ್ಣ ಜ್ಞಾನ ಇದ್ದು, ಆನಂದ್ ಸಿಂಗ್ ಅವರ ಜತೆಗೂಡಿ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ನಿಶ್ಚಿತ. ಪ್ರಧಾನಿ ನರೇಂದ್ರ ಮೋದಿ ಜತೆ ನಿಕಟ ಸಂಬಂಧ ಹೊಂದಿರುವೆ. ನನ್ನನ್ನು ಗೆಲ್ಲಿಸಿದರೆ ಕ್ಷೇತ್ರದ ಹಲವು ಸಮಸ್ಯೆಗಳಿಗ ಧ್ವನಿಯಾಗಿವೆ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.

ಕಣಕಣದಲ್ಲೂ ವಿಜಯನಗರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮಗ ಸೋಲು ಕಂಡರು. ನಾನು ಈ ಸೋಲು ಒಪ್ಪಿಕೊಳ್ಳಲ್ಲ. ೭೪ ಸಾವಿರ ಮತ ನೀಡಿ ಜನ ಆಶೀರ್ವಾದ ಮಾಡಿದ್ದಾರೆ. ನನಗೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳಿದರು ನಾನು ಒಪ್ಪಲಿಲ್ಲ. ನನ್ನ ಕಣಕಣದಲ್ಲಿ ವಿಜಯನಗರವಿದೆ. ಈ ಕ್ಷೇತ್ರ ಬಿಟ್ಟು, ಎಲ್ಲಿಯೂ ಹೋಗಲ್ಲ. ಅಧಿಕಾರದ ಆಸೆ ನನಗಿಲ್ಲ. ವಿಧಾನಸಭೆ ಚುನಾವಣೆ ನಂತರ ಕಳೆದ ೧೦ ತಿಂಗಳಿಂದ ಹೊರಗೆ ಬಂದಿಲ್ಲ. ಇದಕ್ಕೆ ಉತ್ತರ ಮೇ೧೩ರ ನಂತರ ಹೇಳುವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!