ಹರಪನಹಳ್ಳಿ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತದಾರರನ್ನು ಕೋರಿದರು.
ಪ್ರಜ್ಞಾವಂತ ಹಾಗೂ ಪ್ರಬುದ್ಧ ಮತದಾರರಿದ್ದೀರಿ, ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರಿಗೆ ಬೆಂಬಲಿಸಿ ಎಂದ ಅವರು, ಐದು ಬಾರಿ ಇಲ್ಲಿ ಸಂಸದರಾಗಿದ್ದವರು ಅಭಿವೃದ್ಧಿ ಏನು ಮಾಡಿದ್ದೇವೆ ಎಂದು ಹೇಳುವುದು ಬಿಟ್ಟು ಮೋದಿ ಹೆಸರೇಳಿ ಮತ ಕೇಳುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಅವುಗಳಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ 25 ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದು, ನೀವು ಮತ ಹಾಕಿ ಗೆಲ್ಲಿಸಿದರೆ ರಾಜ್ಯ ಸರ್ಕಾರ ಜಾರಿ ಮಾಡಿದಂತೆ ಅವುಗಳನ್ನು ಜಾರಿ ಮಾಡುತ್ತದೆ ಎಂದು ಅವರು ತಿಳಿಸಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ಎಂದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಮಾತಿಗೆ ತಪ್ಪಿದ ಸರ್ಕಾರಕ್ಕೆ ಮತ ಹಾಕದೇ ನುಡಿದಂತೆ ನಡೆದ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಕೋರಿದರು.
ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅರಸಿಕೇರಿ ಎನ್.ಕೊಟ್ರೇಶ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಕಳೆದ 10 ವರ್ಷದಲ್ಲಿ ದೇಶ ಅಧೋಗತಿಗೆ ಹೋಗಿದೆ. ಗೊಬ್ಬರ ದರ ಜಾಸ್ತಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.