ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಈಗ ನಡೆಯಲಿರುವ ಲೊಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ರಾಧಾಕೃಷ್ಣ ದೊಡ್ಮನಿ ಅವರನ್ನು ಆಶೀರ್ವಾದಿಸಿದರೆ ನಮ್ಮ ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ಇನ್ನಷ್ಟು ವೇಗ ನೀಡಿದಂತಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರ ರಾಜ್ಯದ ಜನತೆಗೆ ವಿಧಾನ ಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ೫ ಪ್ರಮುಖ ಗ್ಯಾರಂಟಿ ಯೊಜನೆಗಳನ್ನು ಅಧಿಕಾರ ಪಡೆದ ತಕ್ಷಣವೇ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರಿಗೆ ನಾನು ಕೊಟ್ಟಿರುವ ೬ ನೇ ಗ್ಯಾರಂಟಿಯನ್ನು ಕೇವಲ ೮ ತಿಂಗಳಲ್ಲಿಯೇ ಅವರ ಮನೆ ಖಾಲಿ ಮಾಡಿಸುವ ಮೂಲಕ ಮತದಾರರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಪರೋಕ್ಷವಾಗಿ ಹೆಸರು ಹೇಳದೇ ಚಿತ್ತಾಪುರ ಬಿಜೆಪಿ ಪರಾಜಿತ ಅಭ್ಯರ್ಥಿಯ ವಿರುದ್ಧ ವಾಗ್ದಾಳಿ ನಡೆಸಿದರು.ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಪುರ, ಶಾಸಕರಾದ ಅಲಂಪ್ರಭು ಪಾಟೀಲ, ಎಂವೈ ಪಾಟೀಲ, ತಿಪ್ಪಣ್ಣ÷ಪ್ಪ ಕಮಕನೂರ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ರೇವುನಾಯಕ ಬೆಳಮಗಿ, ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುತ್ತೇವೆ ಎಂದು ಈ ಭಾಗದ ಪ್ರಮುಖ ಕೋಲಿ ಸಮಾಜದ ನಾಯಕರನ್ನು ಕೇಸರಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧಿಕಾರ ಪಡೆದು ಚುನಾವಣೆ ಮುಗಿದ ನಂತರ ಆ ಸಮಾಜಕ್ಕೆ ಮೊಸ ಮಾಡಿದ್ದಾರೆ. ಇದನ್ನು ನೋಡಿ ಪಕ್ಷ ತೊರೆದಿದ್ದ ಹಲವು ನಾಯಕರು ಮತ್ತೆ ಕಾಂಗೆಸ್‌ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಕೇವಲ ಶ್ರೀಮಂತರ ಪಕ್ಷವಾಗಿದೆ. ಆದ್ದರಿಂದ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಜನಪರ ಯೊಜನೆಗಳು ಆ ಪಕ್ಷದಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ ಮಾತನಾಡಿ, ಬಿಜೆಪಿ ಅಬ್ ಕೀ ಬಾರ್ ೪೦೦ ಪರ್ ಎಂದು ಘೋಷಣೆ ಮೂಲಕ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದೆ. ಆದ್ರೆ ಮತದಾರರು ಈ ಬಾರಿ ಅವರನ್ನು ೪೦೦ ಪರ್ ನಹೀ, ಬಿಜೆಪಿಯನ್ನು ಅಬ್ ಕೀ ಬಾರ್ ದೇಶ್ ಸೇ ಬಾಹೆರ್ ಮಾಡುವ ಮೂಲಕ ಮತದಾರರು ಪಾಠ ಕಲಿಸುತ್ತಾರೆ ಎಂದರು.