ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ಮತಹಾಕಿ: ರಾಜ್ಯಪಾಲ

KannadaprabhaNewsNetwork |  
Published : Jan 26, 2024, 01:47 AM IST
Townhall  4 | Kannada Prabha

ಸಾರಾಂಶ

ಬಲಿಷ್ಠ ಪ್ರಜಾಪ್ರಭುತ್ವ ರಚನೆಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌ ಕರೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಕೊಡುಗೆ ನೀಡಬೇಕು ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಗುರುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಮುಂದೆ ಬಂದು ದೇಶದ ನಾಯಕತ್ವ ಆಯ್ಕೆಯಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಮತದಾನ ಮಾಡುವುದು ಗಣರಾಜ್ಯಕ್ಕೆ ತ್ಯಾಗ ಮಾಡಿದಂತೆ, ಪ್ರತಿಯೊಂದು ಮತ ಯಜ್ಞವಿದ್ದಂತೆ, ಒಂದು ಮತ ಹಾಕದಿದ್ದರೆ ಏನಾಗುತ್ತದೋ ಎಂದು ಕೆಲವರು ಮತ ಚಲಾಯಿಸುವುದಿಲ್ಲ, ಆದರೆ ಹಲವು ಬಾರಿ ಗೆಲುವು ಹಾಗೂ ಸೋಲು ಒಂದು ಮತದಿಂದ ನಿರ್ಧಾರವಾಗುತ್ತದೆ ಎಂದರು.

ಭಾರತದಲ್ಲಿ ಮತದಾನ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಗಳು ಹಲವು ಬಾರಿ ನಡೆದಿವೆ. ಆದರೆ ಮತದಾರರನ್ನು ಪ್ರೇರೇಪಿಸುವ ಮೂಲಕ ಮಾತ್ರ ಮತದಾನ ಪ್ರಕ್ರಿಯೆ ಯಶಸ್ವಿಗೊಳಿಸಬೇಕು ಎಂದು ನಿರ್ಧರಿಸಲಾಗಿದೆ. ಯುವಕರು ಸಮಾಜದ ಪ್ರಜ್ಞಾಪೂರ್ವಕ ನಾಗರಿಕರಾಗಿ ಪ್ರಜಾಪ್ರಭುತ್ವ ಬಲಪಡಿಸಲು ಕೆಲಸ ಮಾಡಬೇಕು. ಹೊಸ ಮತದಾರರಲ್ಲಿ ನೋಂದಣಿ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸಲು, ಮತದಾರರ ಶಿಕ್ಷಣ ಮತ್ತು ಮಾಹಿತಿಗಾಗಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ಎಲ್ಲ ಯುವ ಮತದಾರರು ಸ್ವಯಂಪ್ರೇರಿತವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾತನಾಡಿದರು.ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೂರ್ಮರಾವ್, ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್, ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್ ಇದ್ದರು.‘ನಾ ಭಾರತ’ ಹಾಡು ಬಿಡುಗಡೆ:

ಕನ್ನಡ ಅವತಣಿಕೆಯ ‘ನಾ ಭಾರತ’ ಹಾಡನ್ನು ಅನಾವರಣಗೊಳಿಸಲಾಯಿತು. ಮೊದಲ ಬಾರಿ ಮತದಾನ ಮಾಡುವ ಯುವಕರು, ಅಂಗವಿಕಲರು, ತೃತೀಯ ಲಿಂಗಿ ಹಾಗೂ ಬುಡಕಟ್ಟು ಜನಾಂಗದವರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬ್ಯಾಡ್ಜ್ ವಿತರಿಸಿ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ವಿತರಿಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ