ಮತ ಚಲಾಯಿಸಿ ಕಾಡಿನ ಮಕ್ಕಳ ಪೀಕಲಾಟ

KannadaprabhaNewsNetwork | Published : May 1, 2024 1:17 AM

ಸಾರಾಂಶ

ಮೆಂದರೆ ಗ್ರಾಮದ ಜನ ಮತದಾನ ಮಾಡಿ ಪೀಕಲಾಟಕ್ಕೆ ಸಿಲುಕಿರುವ ಸನ್ನಿವೇಶ ಕುಗ್ರಾಮದಲ್ಲಿ ಎದುರಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಠಾಣಾ ಸರಹದ್ದಿನ ಕುಗ್ರಾಮ ಮೆಂದರೆ ಗ್ರಾಮದಲ್ಲಿ 80 ಮನೆಗಳಿದ್ದು 200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸೋಮವಾರ ನಡೆದ ಮರುಮತದಾನದಲ್ಲಿ ಗ್ರಾಮದ 58 ಜನರು ಮಾತ್ರ ಮತದಾನ ಮಾಡಿದ್ದಾರೆ.

ಜಿ.ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮೆಂದರೆ ಗ್ರಾಮದ ಜನ ಮತದಾನ ಮಾಡಿ ಪೀಕಲಾಟಕ್ಕೆ ಸಿಲುಕಿರುವ ಸನ್ನಿವೇಶ ಕುಗ್ರಾಮದಲ್ಲಿ ಎದುರಾಗಿದೆ. ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಠಾಣಾ ಸರಹದ್ದಿನ ಕುಗ್ರಾಮ ಮೆಂದರೆ ಗ್ರಾಮದಲ್ಲಿ 80 ಮನೆಗಳಿದ್ದು 200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸೋಮವಾರ ನಡೆದ ಮರುಮತದಾನದಲ್ಲಿ ಗ್ರಾಮದ 58 ಜನರು ಮಾತ್ರ ಮತದಾನ ಮಾಡಿದ್ದಾರೆ.

ಭಯದ ವಾತಾವರಣ: ತಮ್ಮ ಹಕ್ಕನ್ನು ಚಲಾಯಿಸಿದ ಬಳಿಕ ತಮ್ಮ ಮೇಲೆ ದಾಳಿ ಆಗಬಹುದೆಂಬ ಭಯದ ವಾತಾವರಣದಲ್ಲೇ ಕಾಲ ಕಳೆಯುವ ಸ್ಥಿತಿ ಎದುರಾಗಿದೆ. ಮಲೆ ಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಬರುವ ಇಂಡಿಗನತ್ತ, ಮೆಂದರೆ, ತುಳಸಿಕೆರೆ, ಪಡಸಲನತ್ತ,‌ ನಾಗಮಲೆ ಈ ಭಾಗದ ಜನರು ಈಗಲೂ ಮೂಲಸೌಕರ್ಯದಿಂದ ಕುಗ್ರಾಮಗಳ ಜನತೆ ವಂಚಿತರಾಗಿದ್ದಾರೆ.

ಮೂಲಸೌಕರ್ಯ ಕೊರತೆ: ತಲ ತಲಾಂತರದಿಂದ ವಾಸ ಮಾಡುತ್ತಿರುವ ಇಲ್ಲಿನ ಕುಗ್ರಾಮಗಳ ಜನತೆ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಹಲವಾರು ಪ್ರತಿಭಟನೆಗಳು ನಡೆದಿವೆ. ಕಳೆದ ಕೆಲವು ಚುನಾವಣೆಗಳಿಂದ ಮತಸಾನ ಬಹಿಷ್ಕಾರ ಎಚ್ಚರಿಕೆಗಳನ್ನು ಕೊಡುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಗ್ರಾಮಗಳತ್ತ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸುವುದು ಬಿಟ್ಟರೆ ಈ ಗ್ರಾಮಗಳ ಸ್ಥಿತಿಗತಿ ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವುದಿಲ್ಲ. ಲೋಕಸಭಾ ಚುನಾವಣೆ ಮತದಾನ ಏ.26ರಂದು ನಡೆದ ಸಂದರ್ಭದಲ್ಲಿ ಮೆಂದರೆ ಗ್ರಾಮದ ಜನತೆಯನ್ನು ಇಂಡಿಗನತ್ತ ಗ್ರಾಮಕ್ಕೆ ಕರೆ ತಂದು ಮತದಾನ ಮಾಡಿಸಿರುವುದೇ ಹಿಂಸಾಚಾರ ಘಟನೆಗೆ ಕಾರಣ ಎನ್ನಲಾಗಿದೆ.

ಏ. 26ರಂದು ಲೋಕಸಭಾ ಚುನಾವಣೆ ಮತದಾನ ವೇಳೆಯಲ್ಲಿ ನಡೆದಂತಹ ಮತಗಟ್ಟೆ ಧ್ವಂಸ ಹಾಗೂ ಅಧಿಕಾರಿಗಳ ಮೇಲೆ ಹಲ್ಲೆ ಇದರಿಂದಾಗಿ ಎರಡು ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಂಡಿಗನತ್ತ ಗ್ರಾಮದಲ್ಲಿ ಜನತೆಯ ಮೇಲೆ ಮೂರು ಪ್ರಕರಣಗಳು ದಾಖಲಾಗಿ ಹಲವರು ಜೈಲಿನಲ್ಲಿದ್ದು ಇನ್ನೂ ಕೆಲವರು ತಲೆಮರಿಸಿಕೊಂಡಿದ್ದಾರೆ. ಸಣ್ಣ ಮಕ್ಕಳು, ಮಹಿಳೆಯರು, ವೃದ್ಧರಿಗೆ ಆಹಾರ, ಪ್ರಾಣಿಗಳಿಗೆ ಮೇವಿಲ್ಲದೆ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ.

ಶಾಂತಿ ಮರು ಸ್ಥಾಪನೆ ಅಗತ್ಯ:

ಇಂಡಿಗನತ್ತ ಗ್ರಾಮದಲ್ಲಿ ನಡೆದಂತಹ ಗಲಭೆ ಪ್ರಕರಣದಲ್ಲಿ 250 ರಿಂದ 300 ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿರುವುದರಿಂದ ಇಂತಹ ಘಟನೆಗಳಿಗೆ ಸರ್ಕಾರ ಅವಕಾಶ ನೀಡದೆ ಶಾಂತಿ ಮರು ಸ್ಥಾಪನೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ. ಕಾಡಿನ ಮಕ್ಕಳ ರಕ್ಷಣೆಯ ಜೊತೆಗೆ ಅಭಿವೃದ್ಧಿಯತ್ತ ಗಮನ ಹರಿಸಬೇಕು.

ಆಕಾಶದಮಳೆ, ಭೂಮಿಯ ಬೆಳೆ ನಂಬಿ ಬದುಕುತ್ತಿರುವ ಮಲೆಮಹದೇಶ್ವರನ ತಪ್ಪಲಿನಲ್ಲಿ ವಾಸಿಸುವ ಜನರಿಗೆ ಸೌಲಭ್ಯವೇ ನೀಡದೆ ಮತದಾನವನ್ನು ಮಾಡುವಂತಹ ಪ್ರೇರೇಪಣೆಗಳು ಬೇಡ. ಇಂತಹ ಅವಘಡಗಳಿಗೂ ಅವಕಾಶ ನೀಡದೆ ಗ್ರಾಮಗಳಲ್ಲಿ ಶಾಂತಿ ನೆಲೆಸಬೇಕು ಎಂದು ಎರಡು ಗ್ರಾಮದ ನಿವಾಸಿಗಳು ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮಲೆ ಮಹದೇಶ್ವರ ನಡೆದಾಡಿದಂತಹ ಗ್ರಾಮಗಳಲ್ಲಿ ಶಾಂತಿ ನೆಲೆಸಲು ಸರ್ಕಾರ ಮಧ್ಯ ಪ್ರವೇಶ ಮಾಡಿ ಇಂತಹ ಘಟನೆಗಳು ಜರುಗದಂತೆ ಕ್ರಮವಹಿಸುವುದರ ಜೊತೆಗೆ ರಕ್ಷಣೆ ನೀಡಬೇಕು. ಗ್ರಾಮಗಳಿಗೆ ಬೇಕಾಗಿರುವ ಸೌಲಭ್ಯ ನೀಡುವಂತೆ ಕ್ರಮ ವಹಿಸಬೇಕಾಗಿದೆ.ಮತದಾನ ಮಾಡಿ ಇಂದು ಹಕ್ಕು ಚಲಾಯಿಸಿರುವ ಮೆಂದರೆ ಗ್ರಾಮದ ಜನತೆ ಬಗ್ಗೆ ರಕ್ಷಣೆ ನೀಡುವುದರ ಜೊತೆಗೆ ಗ್ರಾಮಗಳಲ್ಲಿ ಶಾಂತಿ ಮರು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಜರುಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು.

-ಮುತ್ತಯ್ಯ, ಬುಡಕಟ್ಟು ಸಮುದಾಯ ರಾಜ್ಯ ಕಾರ್ಯದರ್ಶಿ

Share this article