ಹಾನಗಲ್ಲ: ಮತದಾನದಿಂದ ದೂರ ಉಳಿಯುವುದರಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಬೇಕು ಎಂದು ಹಾನಗಲ್ಲ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ವರಿ ಪುರಾಣಿಕ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅವರು, ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಈಗೀಗ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮತದಾನದ ಮಹತ್ವದ ಕುರಿತು ತಿಳಿವಳಿಕೆ ಮೂಡಿಸಬೇಕಾಗಿದೆ. ಹೆಚ್ಚು ಪ್ರಮಾಣದಲ್ಲಿ ಮತದಾನವಾಗಬೇಕು. ಮುಖ್ಯವಾಗಿ ಯೋಗ್ಯರಿಗೆ ಮತ ಚಲಾಯಿಸಬೇಕು ಎಂದರು.ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಏಕಪ್ರಭುತ್ವ, ಮಿಲಿಟರಿ ಆಡಳಿತ ಹೊಂದಿರುವ ದೇಶಗಳ ಪರಿಸ್ಥಿತಿ ಇಂದು ನಮ್ಮ ಕಣ್ಮುಂದೆ ಇದೆ. ಸುದೀರ್ಘ ಅವಧಿಯಿಂದ ಏಕತೆಯಲ್ಲಿ ಮುನ್ನಡೆಯುತ್ತಿರುವ ಭಾರತಕ್ಕೆ ಪ್ರಜಾಪ್ರಭುತ್ವವೇ ಶಕ್ತಿ. ವಿವೇಚನೆ, ವಿವೇಕದಿಂದ ಮತ ಚಲಾಯಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಮತದಾರ ಈ ದೇಶದ ಬುನಾದಿ. ಮತದಾನ ನಮ್ಮ ಹೊಣೆಗಾರಿಯೂ ಹೌದು. ದೇಶದ ಸುರಕ್ಷತೆ, ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು ಎಂದರು.ಮತದಾರರ ದಿನ ಅಂಗವಾಗಿ ಶಾಲೆ, ಕಾಲೇಜುಗಳಲ್ಲಿ ಏರ್ಪಡಿಸಿದ್ದ ಚಿತ್ರಕಲೆ, ಭಾಷಣ ಮತ್ತಿತರ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚುನಾವಣೆ ಸಿಬ್ಬಂದಿಗೆ ತರಬೇತಿ ನೀಡುವ ಉತ್ತಮ ಟ್ರೇನರ್ ಎಂದು ಶಿಕ್ಷಕರಾದ ಮಹೇಶ ನಾಯಕ, ವೀರಪ್ಪ ಕೆರೆಗೊಂಡರ, ಮತಗಟ್ಟೆ ಮಟ್ಟದ ಅಧಿಕಾರಿ ಉಮೇಶ ಎಸ್., ಜಿ.ಜಿ. ಜಾಡರ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್. ಕಾಳಗಿ, ಬಿಇಒ ವಿ.ವಿ. ಸಾಲಿಮಠ, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ., ಸಿಪಿಐ ಆಂಜನೇಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗಂಗಾ ಹಿರೇಮಠ, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಎಸ್. ಆನಂದ ಇದ್ದರು.