ಮಡಿಕೇರಿ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಇದುವರೆಗಿನ ಪ್ರಕ್ರಿಯೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮಂಗಳವಾರ ಸಭೆ ನಡೆಸಿದರು. ನಗರದ ತಹಸೀಲ್ದಾರರ ಕಚೇರಿಯಲ್ಲಿ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆಯು ನಿರಂತರವಾಗಿದ್ದು, 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದು ಎಂದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಟ, ಜೊತೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹಾಗೆಯೇ ಎಸ್‌ಐಆರ್ ಪ್ರಕ್ರಿಯೆ ಸಮಯದಲ್ಲಿ ಮ್ಯಾಪಿಂಗ್ ಆಗದಿರುವ ಹಿನ್ನೆಲೆ ಜಿಲ್ಲೆಯಲ್ಲಿ 58,883 ಮಂದಿಗೆ ನೋಟೀಸ್ ನೀಡಲಾಗಿತ್ತು, ಇದರಲ್ಲಿ ಸೆ. 21 ಕ್ಕೆ 36,243 ಮಂದಿ ಮಾಹಿತಿ ನೀಡಿ ಸರಿಪಡಿಸಲಾಗಿದೆ. ಉಳಿದಂತೆ 22,640 ಮಾಹಿತಿ ನೀಡಲು ಬಾಕಿ ಇದ್ದು, ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಮ್ಯಾಪಿಂಗ್ ಆಗದಿರುವ ಮತದಾರರಿಗೆ ನೋಟೀಸ್ ನೀಡಲಾಗಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ತೆರಳಿ ಮಾಹಿತಿ ನೀಡಿ ಸರಿಪಡಿಸಿಕೊಳ್ಳುವಂತಾಗಬೇಕು. ಇಲ್ಲದಿದ್ದಲ್ಲಿ ಹೊಸದಾಗಿ ನಮೂನೆ-6 ನೀಡಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವಂತಾಗಬೇಕು ಎಂದು ಉಪ ವಿಭಾಗಾಧಿಕಾರಿ ಅವರು ಸಲಹೆ ಮಾಡಿದರು.
ಈ ಸಂದರ್ಭ ಮಾತನಾಡಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರತಿನಿಧಿ ತೆನ್ನಿರಾ ಮೈನಾ ಅವರು ನೋಟೀಸ್ ಪಡೆದಿರುವ ವಯಸ್ಸಾದವರು, ವಿಶೇಷ ಚೇತನರು ಇತರರಿಗೆ ಹೆಚ್ಚಿನ ಆದ್ಯತೆ ನೀಡಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಸರಿಪಡಿಸುವಂತಾಗಬೇಕು ಎಂದು ಕೋರಿದರು.‘ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ತೃಪ್ತಿಯುತವಾಗಿ ನಡೆಯುತ್ತಿದ್ದು, ಆರಂಭದಲ್ಲಿ ಒಂದು ರೀತಿ ಆತಂಕವಿತ್ತು, ಆದರೆ ಎಸ್‌ಐಆರ್ ಪ್ರಕ್ರಿಯೆ ಗಮನಿಸಿದಾಗ ಈ ಪ್ರಕ್ರಿಯೆ ಎಂದೋ ಆಗಬೇಕಿತ್ತು ಎಂದು ತೆನ್ನೀರ ಮೈನಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.’ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಶೇ.100 ರಷ್ಟು ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂಬುದು ರಾಜಕೀಯ ಪಕ್ಷಗಳ ಆಶಯವಾಗಿದೆ ಎಂದು ತೆನ್ನೀರಾ ಮೈನಾ ಅವರು ಹೇಳಿದರು.ಬಿಜೆಪಿಯ ಸಜಿಲ್ ಕೃಷ್ಣ ಅವರು ಮಾತನಾಡಿ ಭಾರತೀಯ ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ, ಯಾವುದೇ ರೀತಿ ಗೊಂದಲವಿಲ್ಲದೆ ನಡೆಸಿದೆ. ಇದಕ್ಕೆ ಮತದಾರರು ಸಹ ಉತ್ತಮ ಸ್ಪಂದನೆ ನೀಡಿದ್ದು, ಅರ್ಹ ಮತದಾರರು ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ತಹಸೀಲ್ದಾರ್ ಶ್ರೀಧರ್ ಅವರು ಎಸ್‌ಐಆರ್ ಪ್ರಕ್ರಿಯೆ ಸಂಬಂಧ ಹಲವು ಮಾಹಿತಿ ನೀಡಿದರು. ಚುನಾವಣಾ ಶಿರಸ್ತೆದಾರರಾದ ಚಂದ್ರಶೇಖರ್ ಇತರರು ಇದ್ದರು.