ಮತ್ತೆ ಬಿಜೆಪಿಗೆ ಮಣೆಹಾಕಿದ ತುಮಕೂರು ಜಿಲ್ಲೆ ಮತದಾರ

KannadaprabhaNewsNetwork |  
Published : Jun 05, 2024, 12:31 AM IST
ಬಿಜೆಪಿ | Kannada Prabha

ಸಾರಾಂಶ

ಹೊರಗಿನವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸೋಮಣ್ಣ ಅವರು ಗೆಲ್ಲುವುದರ ಮೂಲಕ ಸುಳ್ಳಾಗಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಗೆದ್ದಿದ್ದು ಈ ಬಾರಿಯೂ ಸೋಮಣ್ಣ ಗೆಲುವಿನೊಂದಿಗೆ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಂಡಿದೆ.

ಉಗಮ ಶ್ರೀನಿವಾಸ್ಕನ್ನಡಪ್ರಭ ವಾರ್ತೆ ತುಮಕೂರುಹೊರಗಿನವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎಂಬ ಮಾತನ್ನು ಸೋಮಣ್ಣ ಅವರು ಗೆಲ್ಲುವುದರ ಮೂಲಕ ಸುಳ್ಳಾಗಿಸಿದ್ದಾರೆ. ಕಳೆದ ಬಾರಿ ಬಿಜೆಪಿ ಗೆದ್ದಿದ್ದು ಈ ಬಾರಿಯೂ ಸೋಮಣ್ಣ ಗೆಲುವಿನೊಂದಿಗೆ ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಂಡಿದೆ.ಕಳೆದ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ದೇವೇಗೌಡರು ಅಭ್ಯರ್ಥಿಯಾಗಿದ್ದರೂ ಸಹ ಬಿಜೆಪಿಯ ಬಸವರಾಜು ಎದುರು ಪರಾಭವಗೊಂಡಿದ್ದರು. ಹೊರಗಿನವರು ಗೆಲ್ಲುವುದಿಲ್ಲ ಎಂಬ ಮಾತು ಸುಳ್ಳಾಗಿಸಿದ್ದಾರೆ.ಚುನಾವಣೆಗೆ 8 ತಿಂಗಳು ಇರುವಾಗಲೇ ಆಗ ಸಂಸದರಾಗಿದ್ದ ಜಿ.ಎಸ್. ಬಸವರಾಜು ಅವರು ಸೋಮಣ್ಣನವರನ್ನು ತುಮಕೂರಿಗೆ ಕರೆ ತರುವುದಾಗಿ ಹೇಳಿದ್ದರು. ಆಗಲೇ ತುಮಕೂರು ಕ್ಷೇತ್ರದಲ್ಲಿ 8 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೀಗಾಗಿ ತುಮಕೂರಿಗೆ ಸ್ಪರ್ಧಿಸಲು ಬಂದಾಗ ಅವರಿಗೆ ದೊಡ್ಡ ಒತ್ತಡವೂ ಇತ್ತು. ಆದರೆ ಅದೆಲ್ಲವನ್ನು ನಿವಾರಿಸಿ ಜಯದ ನಗೆ ಬೀರಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿದ್ದು ಈ ಪೈಕಿ ಕಾಂಗ್ರೆಸ್ 4 ಹಾಗೂ ಜೆಡಿಎಸ್ ಮತ್ತು ಬಿಜೆಪಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡೂ ಪಕ್ಷಗಳು ತಲಾ 4 ಕ್ಷೇತ್ರಗಳಲ್ಲಿ ಸಮಬಲವನ್ನು ಸಾಧಿಸಿತ್ತು. ಆದರೆ ಈ ಚುನಾವಣೆಯಲ್ಲಿ ಎಲ್ಲಾ 8 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸುವುದರೊಂದಿಗೆ ಸತತ ಎರಡನೇ ಬಾರಿಗೆ ಬಿಜೆಪಿ ಜಯವನ್ನು ದಾಖಲಿಸಿದೆ.ಭಾರಿ ಅಂತರ: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂದರೆ 1,75,594 ಮತಗಳ ಭಾರಿ ಅಂತರದಿಂದ ಜಯಗಳಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈವರೆಗಿನ ದಾಖಲೆ ಅಂತರ ಇದಾಗಿದೆ. ಒಮ್ಮೆ 75 ಸಾವಿರ ಮತಗಳ ಅಂತರದಿಂದ ಜಯ ಬಂದಿತ್ತು. ಆದರೆ ಈ ಬಾರಿ 1,75,594 ಮತಗಳ ಬೃಹತ್ ಅಂತರದಿಂದ ಜಯಗಳಿಸುವುದರೊಂದಿಗೆ ದಾಖಲೆಯನ್ನು ಸೋಮಣ್ಣ ಬರೆದಿದ್ದಾರೆ.ಚುನಾವಣೆಗೆ ಬಿಜೆಪಿ ಟಿಕೆಟ್ ಪಕ್ಕಾ ಆದ ಕೂಡಲೇ ಸೋಮಣ್ಣ ಅವರು ಇಡೀ ಜಿಲ್ಲೆಯನ್ನು 3 ಬಾರಿ ಸುತ್ತಿದರು. ಎರಡೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಸಮಾಧಾನವಿದ್ದ ಕಡೆಯೆಲ್ಲಾ ಸಮಾಧಾನಗೊಳಿಸಿದರು. ಹೊಸ ಕಾರ್ಯಕರ್ತರ ಪಡೆಯನ್ನು ಕಟ್ಟಿ ಮುನ್ನುಗ್ಗಿದರು. ಅದರ ಫಲವೇ ಈಗ ಗೆಲುವು ಎಂಬ ವ್ಯಾಖ್ಯಾನ ಜಿಲ್ಲೆಯಲ್ಲಿ ಆರಂಭವಾಗಿದೆ.

ಸೋಮಣ್ಣ ಮೇಲೆ ಎರಡನೇ ಕಾಶಿ ಮಾಡುವ ಜವಾಬ್ದಾರಿ: ಸ್ಮಾರ್ಟ್ ಸಿಟಿಯೂ ಆಗಿರುವ ತುಮಕೂರನ್ನು ಎರಡನೇ ವಾರಣಾಸಿಯನ್ನಾಗಿ ಮಾಡುವ ಕನಸನ್ನು ಸೋಮಣ್ಣ ಚುನಾವಣೆಗೂ ಮುನ್ನವೇ ಕಂಡಿದ್ದರು. ಈಗ ಅವರ ಗೆಲುವಿನೊಂದಿಗೆ ಎರಡನೇ ಕಾಶಿಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಜವಾಬ್ದಾರಿ ಸೋಮಣ್ಣ ಅವರ ಮೇಲಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ